Advertisement

Education: ವರ್ಗಾವಣೆಗೊಂಡ ಶಿಕ್ಷಕರಿಗಿಲ್ಲ ಬಿಡುಗಡೆ ಭಾಗ್ಯ

12:51 AM Aug 17, 2023 | Team Udayavani |

ದಾವಣಗೆರೆ: ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಈ ಬಾರಿ ದೊಡ್ಡ ಪ್ರಮಾಣ ದಲ್ಲಿ ವರ್ಗಾವಣೆ ಯೋಗ ದೊರಕಿ ದ್ದರೂ ಸಾವಿರಾರು ಶಿಕ್ಷಕರಿಗೆ ಇನ್ನೂ ಶಾಲೆಯಿಂದ ಬಿಡುಗಡೆ ಭಾಗ್ಯ ದೊರಕಿಲ್ಲ.

Advertisement

ಕಾಯಂ ಶಿಕ್ಷಕರ ವರ್ಗಾವಣೆ ಯಿಂದಾಗುವ ತೊಂದರೆ ಪರಿಹಾರ ವಾಗುವವರೆಗೆ ವರ್ಗಾಯಿತ ಶಿಕ್ಷಕರನ್ನು ಬಿಡುಗಡೆ ಮಾಡಲಾಗದು ಎಂದು ಹಲವು ಜಿಲ್ಲೆಗಳಲ್ಲಿ ಉಪ ನಿರ್ದೇಶಕರು ಪಟ್ಟು ಹಿಡಿದಿದ್ದಾರೆ. ಹಾಗಾಗಿ ವರ್ಗಾವಣೆಗೊಂಡರೂ ಶಿಕ್ಷಕರು ಬಿಡುಗಡೆಗೊಂಡಿಲ್ಲ. ಆದರೆ ಶಿಕ್ಷಣ ಇಲಾಖೆಯ ಮುಖ್ಯ ಕಚೇರಿ ಅಧಿಕಾರಿಗಳು ಒಮ್ಮೆ ವರ್ಗಾವಣೆಗೊಂಡರೆ ಮತ್ತೆ ಅದನ್ನು ತಡೆ ಹಿಡಿಯಲಾಗದು ಎನ್ನುತ್ತಾರೆ.

ಇದೇ ಮೊದಲ ಬಾರಿಗೆ 30 ಸಾವಿರಕ್ಕೂ ಅಧಿಕ ಶಿಕ್ಷಕರು ವರ್ಗಾವಣೆ ಗೊಂಡಿದ್ದಾರೆ. ಇದರಲ್ಲಿ ಪ್ರಾಥಮಿಕ ಶಾಲೆಯ 23,747, ಪ್ರೌಢಶಾಲೆಯ 6, 882 ಶಿಕ್ಷಕರಿದ್ದಾರೆ.

ಪ್ರಮುಖವಾಗಿ, ಬೀದರ್‌, ರಾಯಚೂರು, ರಾಮನಗರ, ಯಾದಗಿರಿ ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚಿದೆ. ವರ್ಗಾವಣೆಯಿಂದ ಸ್ಥಳೀಯವಾಗಿ ಶಾಲಾ ಚಟುವಟಿಕೆಗೆ ತೊಂದರೆಯಾಗುತ್ತದೆಂದು ಕೆಲವು ಜಿಲ್ಲೆಗಳಲ್ಲಿ ಉಪನಿರ್ದೇಶಕರು ಬಿಡುಗಡೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ. ಮತ್ತೂಂದೆಡೆ ಕೆಲವು ಜಿಲ್ಲೆಗಳಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು, ವರ್ಗಾವಣೆಗೊಂಡ ಶಿಕ್ಷಕರು ಕೂಡಲೇ ಶಾಲೆಗೆ ಹಾಜರಾಗದಿದ್ದರೆ ಒಂದು ತಿಂಗಳ ವೇತನ ತಡೆ ಹಿಡಿಯುವ ಇಲ್ಲವೇ ಶಿಸ್ತುಕ್ರಮದ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ. ಇದರಿಂದ ವರ್ಗಾವಣೆಗೊಂಡ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಬೀದರ ಜಿಲ್ಲೆಯ ಉಪ ನಿರ್ದೇಶಕರು ಜ್ಞಾಪನಾ ಪತ್ರ ಹೊರಡಿಸಿ, ವರ್ಗಾವಣೆಗೊಂಡ ಎಲ್ಲ ಶಿಕ್ಷಕರು ತುರ್ತಾಗಿ ವರ್ಗಾಯಿತ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಒಂದು ವೇಳೆ ವರ್ಗಾವಣೆಗೊಂಡ ಶಾಲೆಯಿಂದ ಬಿಡುಗಡೆ ಹೊಂದದೆ ಇದ್ದಲ್ಲಿ ಸಂಬಂಧಿಸಿದ ಶಿಕ್ಷಕರ ವೇತನ ಈ ತಿಂಗಳು ತಡೆಹಿಡಿಯಲಾ ಗುವುದು. ಇಲ್ಲವೇ ಅಂಥ ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ವರದಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Advertisement

ಒಮ್ಮೆ ವರ್ಗಾವಣೆಯಾದ ಬಳಿಕ ಅವರನ್ನು ತಡೆಹಿಡಿಯಲು ಶಿಕ್ಷಣ ಇಲಾಖೆಗೆ ನಿಯಮಾನುಸಾರ ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಕರ ಕೊರತೆಯಾಗುತ್ತಿರುವ ಜಿಲ್ಲೆಗಳಲ್ಲಿ ಬಿಡುಗಡೆ ಆದೇಶವನ್ನು ತಡಮಾಡಲಾಗುತ್ತಿದೆ. ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆಗೊಂಡ ಬಳಿಕವೇ ಈ ಶಾಲೆಗಳಿಂದ ಶಿಕ್ಷಕರ ವರ್ಗಾವಣೆ ನಡೆಯಲಿದೆ. ಹತ್ತು ಹದಿನೈದು ದಿನದೊಳಗೆ ಅತಿಥಿ ಶಿಕ್ಷಕರ ನೇಮಕ ನಡೆಯಲಿದೆ ಎನ್ನುತ್ತಾರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು.

ಮನವರಿಕೆ ಮಾಡಲಾಗಿದೆ
ಶಿಕ್ಷಕರ ವರ್ಗಾವಣೆಯಿಂದ ಮುಖ್ಯವಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಶಾಲೆಗಳಲ್ಲಿ ತೊಂದರೆಯಾಗಿರುವುದು ನಿಜ. ಆದರೆ, ಅಲ್ಲಿಯ ಶಿಕ್ಷಕರು ತಮ್ಮ ಕುಟುಂಬದವರನ್ನು ಬಿಟ್ಟು ಹಲವು ವರ್ಷ ಸೇವೆ ಸಲ್ಲಿಸಿರುವ ಬಗ್ಗೆ ಸಚಿವರು, ಇಲಾಖೆ ಆಯುಕ್ತರಿಗೆ ಮನವರಿಕೆ ಮಾಡಲಾಗಿದೆ. ಇನ್ನೂ 15 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಪ್ರಸ್ತಾವನೆ ಹೋಗಿದ್ದು ಅತಿಥಿ ಶಿಕ್ಷಕರ ನೇಮಕ ಬಳಿಕ ಸಮಸ್ಯೆ ಬಗೆಹರಿಯುತ್ತದೆ.
  ಚಂದ್ರಶೇಖರ ನುಗ್ಗಲಿ,ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ

ನಾವು ನೀಡಿಲ್ಲ
ಶಿಕ್ಷಕರ ವರ್ಗಾವಣೆ ಆದೇಶವನ್ನು ತಡೆ ಹಿಡಿಯುವ ಆದೇಶ ನಾವು ನೀಡಿಲ್ಲ. ಆದರೆ ಕೆಲ ಜಿಲ್ಲೆಗಳಲ್ಲಿ ಅಲ್ಲಿನ ಉಪನಿರ್ದೇಶಕರು ಬಿಡುಗಡೆ ಆದೇಶ ನೀಡುವುದನ್ನು ತಾತ್ಕಾಲಿಕವಾಗಿ ಮುಂದೂಡುತ್ತಿರುವ ಬಗ್ಗೆ ಮಾಹಿತಿಯಿದೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಮೂಲಕ ನಾವು ಶಿಕ್ಷಕರ ಕೊರತೆ ತುಂಬಿಕೊಳ್ಳಲು ಪ್ರಯತ್ನಿಸುತ್ತೇವೆ.
  ಬಿ. ಬಿ. ಕಾವೇರಿ, ಶಿಕ್ಷಣ ಇಲಾಖೆಯ ಆಯುಕ್ತೆ

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next