Advertisement

ನೀರಿನ ಹಣ ನೇರ ವರ್ಗಾಯಿಸಿ

12:30 AM Feb 28, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ನೀಡುವ ಅನುದಾನವನ್ನು ನೇರವಾಗಿ ಜಿಲ್ಲಾ ಪಂಚಾಯತ್‌ಗೆ ಬಿಡುಗಡೆಗೊಳಿಸಲು ನಿರ್ಣಯಿಸಿ ಸರಕಾರಕ್ಕೆ ಕಳುಹಿಸಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತುರ್ತು ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ನೀರಿನ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಹಣ ಬಿಡುಗಡೆ ಯಾಗುವುದರಿಂದ ಪಂಚಾ  ಯತ್‌ ಗಳಿಗೆ ಸಿಗುವುದು ತಡವಾಗುತ್ತಿದೆ. ಇದರಿಂದ ಸಕಾಲಕ್ಕೆ ಸಮಸ್ಯೆ ಪರಿಹರಿಸುವುದು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಡಾ| ಸೆಲ್ವಮಣಿ ಆರ್‌., ಈ ಹಣವನ್ನು ನೇರ ಜಿಪಂಗೆ ಬಿಡುಗಡೆಗೊಳಿಸಬಬೇಕೆಂದು ಸರಕಾರಕ್ಕೆ ನಿರ್ಣಯ ಕಳುಹಿಸಲಾಗುವುದು ಎಂದರು.

ಸದಸ್ಯೆ ಮಮತಾ ಗಟ್ಟಿ ಮಾತನಾಡಿ, ನರಿಂಗಾನ ಪಂಚಾಯತ್‌ಗೆ 8 ಲಕ್ಷ ರೂ. ನೀರಿನ ಬಿಲ್‌ ಬಾಕಿಯಿದೆ. ಕಳೆದೊಂದು ವರ್ಷದಿಂದ ನೀರು ಸರಬರಾಜು ಮಾಡಿದವರು ಬಿಲ್‌ಗಾಗಿ ಕಾಯುತ್ತಿದ್ದಾರೆ ಎಂದರು. ನೀರಿನ ಬಿಲ್‌ಗೆ ಸಂಬಂಧಿಸಿದ ಕಡತವನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿ ಕೊಡಲಾಗಿದೆ ಎಂದು ಸೆಲ್ವಮಣಿ ಉತ್ತರಿಸಿದರು.

ಕೃಷಿಕರ ಖಾತೆಗೆ 29.14 ಕೋಟಿ ರೂ.
ಅಡಕೆ ಕೊಳೆರೋಗಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 56,474 ಮಂದಿ ಕೃಷಿಕರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 28,154 ಮಂದಿ ಕೃಷಿಕರ ಬ್ಯಾಂಕ್‌ ಖಾತೆಗೆ 29.14 ಕೋಟಿ ರೂ. ಪರಿಹಾರ ಜಮಾ ಮಾಡಲಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ವಿವರಿಸಿದರು.

Advertisement

ದ. ಕ. ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಗೆ 22 ಲಕ್ಷ ರೂ. ಬಿಡುಗಡೆಯಾಗಿದೆ. ನೀರು ಸರಬರಾಜಿಗೆ ಸಂಬಂಧಿಸಿದಂತೆ 849 ಕಾಮಗಾರಿಗಳು ಪೂರ್ಣಗೊಂಡಿದ್ದು, 1,185 ಕಾಮಗಾರಿ ಪ್ರಾರಂಭವಾಗಿವೆ ಎಂದು ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ, ಅನಿತಾ ಹೇಮನಾಥ ಶೆಟ್ಟಿ, ಯು.ಟಿ. ಇಬ್ರಾಹಿಂ ಉಪಸ್ಥಿತರಿದ್ದರು.

ರಸ್ತೆ ಅಭಿವೃದ್ದಿಗೆ 56.4 ಕೋಟಿ ರೂ.
ಶಾಸಕರ ವಿಶೇಷ ಅನುದಾನದಡಿಯಲ್ಲಿ ರಸ್ತೆ ಅಭಿವೃದ್ಧಿಗೆ ಕಳೆದ ವರ್ಷ 60.10 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ 56.4 ಕೋಟಿ ರೂ. ಬಿಡುಗಡೆಯಾಗಿದೆ. 870 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, 139 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ವಿವರಿಸಿದರು. 

2018-19ನೇ ಸಾಲಿನ ದೀನ್‌ ದಯಾಳ್‌ ಉಪಾಧ್ಯಾಯ ಪಂಚಾಯತ್‌ ಸಶಕ್ತೀಕರಣ ಪುರಸ್ಕಾರದಡಿ ರಾಜ್ಯದ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಘೋಷಣೆಯಾಗಿರುವ ಪ್ರೋತ್ಸಾಹ ಅನುದಾನದಲ್ಲಿ ದ.ಕ. ಜಿಲ್ಲೆಗೆ 50 ಲಕ್ಷ ರೂ. ಬಿಡುಗಡೆಯಾಗಿದೆ. ಈ ಅನುದಾನವನ್ನು ಕ್ಷೇತ್ರವಾರು ನೆಲೆಯಲ್ಲಿ ಹಂಚಿಕೆ ಮಾಡಲಾಗುವುದು ಎಂದು ಅಧ್ಯಕ್ಷೆ ಮೀನಾಕ್ಷಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next