Advertisement

ಬೇರು ಬಿಟ್ಟಿರುವವರನ್ನು ಬೇರೆಡೆ ವರ್ಗಾಯಿಸಿ

06:36 PM Nov 02, 2021 | Team Udayavani |

ಅಳ್ನಾವರ; ಸಾರ್ವಜನಿಕರು ಕೆಲಸಗಳಿಗೆ ಅಲೆದಾಡಿ ಬೇಸತ್ತಿದ್ದು, ಜಿಡ್ಡುಗಟ್ಟಿರುವ ಪಪಂಗೆ ಮೇಜರ್‌ ಸರ್ಜರಿ ಮಾಡುವ ಮೂಲಕ ಹಲವು ದಶಕಗಳಿಂದ ಇಲ್ಲಿಯೇ ಬೇರು ಬಿಟ್ಟಿರುವ ನೌಕರರನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಐಎಎಸ್‌ ಅಧಿಕಾರಿ ಮುಂದೆ ಪಪಂ ಆಡಳಿತ ಜನಪ್ರತಿನಿಧಿಗಳು ಅವಲೊತ್ತುಕೊಂಡ ಪ್ರಸಂಗ ಸೋಮವಾರ ಪಪಂ ಸಾಮಾನ್ಯ ಸಭೆಯಲ್ಲಿ ಜರುಗಿತು.

Advertisement

ಅರ್ಜಿ ಸಲ್ಲಿಸಿ ಹಲವಾರು ತಿಂಗಳುಗಳೇ ಗತಿಸಿದ್ದರೂ ಕೆಲಸಗಳಾಗುತ್ತಿಲ್ಲ. ಜನಪ್ರತಿನಿಧಿಗಳು ಪಟ್ಟಣ ಪಂಚಾಯಿತಿಯಲ್ಲಿ ಆಚರಿಸುವ ಜಯಂತ್ಯುತ್ಸವ ಮತ್ತು ಫೋಟೋಗಳಿಗೆ ಮಾತ್ರ ಸೀಮಿತವಾದಂತಿದೆ. ಸಭೆಯಲ್ಲಿ ಚರ್ಚಿಸಿದ ಯಾವುದೆ ವಿಷಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಯೋಜನೆಗಳ ಬಗ್ಗೆ ಯಾವುದೇ ಸರಿಯಾದ ಮಾಹಿತಿ ನೀಡಲ್ಲ. ಸಮರ್ಪಕವಾದ ಉತ್ತರ ಕೊಡಲ್ಲ ಎಂದು ಸದಸ್ಯರು ಸಮಸ್ಯೆಯನ್ನು ಬಿಚ್ಚಿಟ್ಟರು.

ಮಾಹಿತಿ ಪಡೆದ ಐಎಎಸ್‌ ಅಧಿಕಾರಿ ಮಾಧವ ಗಿತ್ತೆ ಅವರು ಪಟ್ಟಣ ಪಂಚಾಯಿತಿಯಲ್ಲಿ ಬಾಕಿ ಇರುವ ಪ್ರಕರಣಗಳ ಮಾಹಿತಿ ಪಡೆದು ಕೆಲಸದಲ್ಲಿ ನಿರ್ಲಕ್ಷ ತೋರಿರುವ ಸಿಬ್ಬಂದಿ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು. ಸದಸ್ಯರ ದೂರುಗಳ ಬಗ್ಗೆ ಮುಂದಿನ ಒಂದು ವಾರದಲ್ಲಿ ಸಮಗ್ರ ಪರಿಶೀಲನೆ ಮಾಡಿ ಜನರ ಅಲೆದಾಟ ತಪ್ಪಿಸಲು ಪ್ರಯತ್ನಿಸುತ್ತೇನೆ. ಪಟ್ಟಣ ಪಂಚಾಯಿತಿಯಲ್ಲಿ ಎಲ್ಲರಿಗೂ ಸ್ಪಷ್ಟವಾಗಿ ಕಾಣುವಂತೆ ಸಿಬ್ಬಂದಿ ಹೆಸರು, ಅವರ ನಿರ್ವಹಿಸುವ ವಹಿ ಮತ್ತು ಅವರ ದೂರವಾಣಿ ಸಂಖ್ಯೆ ನಮೂದಿಸಬೇಕು ಮತ್ತು ಯಾವುದೇ ಸಮಸ್ಯೆಗೂ ನನ್ನನ್ನು ಸಂಪರ್ಕಿಸಲು ಜನರಿಗೆ ಪ್ರಚಾರ ಪಡಿಸಲು ಸೂಚಿಸಿದರು.

ಸದಸ್ಯ ಮಧು ಬಡಸ್ಕರ ಮಾತನಾಡಿ, ಅಧಿಕೃತ ಬಡಾವಣೆಗಳಲ್ಲಿ ಮೂಲಸೌಕರ್ಯ ಒದಗಿಸುವುದು ಕರ್ತವ್ಯ. ಆದರೆ ಅಧಿಕಾರಿಗಳು ಅನಧಿಕೃತ ಬಡಾವಣೆಗಳಲ್ಲಿ ಸೌಕರ್ಯ ಒದಗಿಸಲು ಮುಂದಾಗುತ್ತಿದ್ದಾರೆಂದು ಆರೋಪಿಸಿದರು. ವಿವಿಧ ಮಾಹಿತಿ ಸಲ್ಲಿಸಲು ಸಿಬ್ಬಂದಿಗೆ ಸೂಚಿಸಿದರೂ
ಯಾವುದೇ ಮಾಹಿತಿ ಒದಗಿಸುತ್ತಿಲ್ಲ ಎಂದು ಪಪಂ ಉಪಾಧ್ಯಕ್ಷ ನದೀಮ ಕಂಟ್ರಾಕ್ಟರ್‌ ಅಸಹಾಯಕತೆ ವ್ಯಕ್ತಪಡಿಸಿದರು.

ಸಿಬ್ಬಂದಿ ನಿರ್ಲಕ್ಷ್ಯದಿಂದ ಪಟ್ಟಣ ಪಂಚಾಯಿತಿಗೆ ಬರುವ ಆದಾಯದಲ್ಲಿ ಕುಂಠಿತವಾಗುತ್ತಿದೆ. ಪಟ್ಟಣದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳು ಕೊಳೆಯುತ್ತಿವೆ. ಇದರಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಯಾವುದೇ ವಿಳಂಬವಿಲ್ಲದೆ ಕಟ್ಟಡ ನಿರ್ಮಾಣ ಪರವಾನಗಿ ನೀಡಲು ಕ್ರಮ ಕೈಕೊಳ್ಳುವಂತೆ ಗಿತ್ತೆ ಅವರಿಗೆ ಮನವಿ ಮಾಡಿದರು ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದ್ದು ಇದರ ಬಗ್ಗೆ ಪರಿಶೀಲಿಸಬೇಕಿದೆ. ಸಿಬ್ಬಂದಿ ಬದಲಾವಣೆ ಅತಿ ತುರ್ತಾಗಿ ಆಗಬೇಕಿದೆ ಎಂದು ಸದಸ್ಯ ತಮೀಮ
ತೇರಗಾಂವ ಒತ್ತಾಯಿಸಿದರು.

Advertisement

ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಇರುವುದು ಅಗತ್ಯವಿದೆ. ಆಯಾ ತಿಂಗಳ ಖರ್ಚು ವೆಚ್ಚದ ವಿವರಗಳನ್ನು ಎಲ್ಲಾ ಸದಸ್ಯರಿಗೆ ಕಡ್ಡಾಯವಾಗಿ ತಿಳಿಸಬೇಕು. ಹಣದ ದುರ್ಬಳಕೆ ತಡೆಯಲು ಇದು ಅವಶ್ಯವೆನಿಸಿದೆ ಎಂದು ಮಾಧವ ಗಿತ್ತೆ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಳಿ ನದಿಯಿಂದ ತರುವ ನೀರಿನ ಕಾಮಗಾರಿ ಪ್ರಗತಿಯಲ್ಲಿದ್ದು ಅಲ್ಲಲ್ಲಿ ಕಂಡು ಬರುತ್ತಿರುವ ಅಡೆತಡೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

ಅಳ್ನಾವರ ಡೌಗಿ ಹಳ್ಳದಲ್ಲಿ ನೀರಿನ ಸಂಗ್ರಹ ಅತ್ಯಂತ ಕಡಿಮೆಯಿದ್ದು, ಮುಂದಿನ ಒಂದೆರಡು ತಿಂಗಳುಗಳ ನಂತರ ನೀರಿನ ಸಮಸ್ಯೆ ಎದುರಾಗಬಹುದಾಗಿದ್ದು ಈಗಲೇ ಗಮನ ಹರಿಸುವಂತೆ ಸದಸ್ಯರು ತಿಳಿಸಿದರು. ಮಂಗಲಾ ರವಳಪ್ಪನವರ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next