ಹೊನ್ನಾಳಿ: ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಗುರುಪಾದಯ್ಯ ಮಠದ್ ಅವರ ಪತ್ನಿ ಮಂಜುಳಾ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವವಹಿಸುತ್ತಿದ್ದು, ಠಾಣೆಯ ಎಲ್ಲಾ ಮಾಹಿತಿಯನ್ನು ತಮ್ಮ ಪತಿಗೆ ತಿಳಿಸುತ್ತಿರುವುದರಿಂದ ಅವರನ್ನು ತಕ್ಷಣ ಬೇರೆ ತಾಲೂಕಿಗೆ ವರ್ಗಾವಣೆ ಮಾಡಬೇಕು ಎಂದು ದಲಿತ ಮುಖಂಡರಾದ ದಿಡಗೂರು ರುದ್ರೇಶ್ ಮತ್ತು ತಮ್ಮಣ್ಣ ಒತ್ತಾಯಿಸಿದರು.
ಸೋಮವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಜನಾಂಗದ ಹಿತರಕ್ಷಣಾ ಜಾಗೃತ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಕುಂದೂರು ಗ್ರಾಮದ ಪ್ರಸನ್ನಕುಮಾರ್ ಎಂಬುವವರು ಭ್ರಷ್ಟಾಚಾರ ವಿರೋಧಿ ವೇದಿಕೆ ನಿರ್ದೇಶಕರಾಗಿದ್ದು, ಗ್ರಾಪಂ ಅಧ್ಯಕ್ಷೆ ಪತಿ ಮಂಜಪ್ಪ ಮತ್ತು ಮಾಜಿ ಅಧ್ಯಕ್ಷೆ ಮಗ ಆಂಜನೇಯ ಮೇಲೆ ಹಲ್ಲೆ ಎಸಗಿ ಜಾತಿ ನಿಂದನೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯೆಲ್ಲವನ್ನು ಪೇದೆ ಮಂಜುಳಾ ತಮ್ಮ ಪತಿಗೆ ತಿಳಿಸಿ ಇಲ್ಲದ ಅವಘಡಗಳಿಗೆ ಕಾರಣರಾಗಿದ್ದಾರೆ. ಇಂತಹವರನ್ನು ತಕ್ಷಣ ಬೇರೆ ಕಡೆಗೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರಸನ್ನಕುಮಾರ್ ವಿರುದ್ಧ ಜಾತಿ ನಿಂದನೆ ದೂರು ದಾಖಲಾಗಿದ್ದರೂ ಈವರೆಗೆ ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಿಡಗೂರು ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ಆಂಜನೇಯ ದೇವಸ್ಥಾನದಲ್ಲಿ ಕಳೆದ 10 ವರ್ಷಗಳಿಂದ ಸುಮಾರು 36 ಲಕ್ಷ ರೂ. ಹುಂಡಿ ಹಣ ದುರುಪಯೋಗವಾಗಿದೆ. ತಹಶೀಲ್ದಾರ್ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖಂಡ ತಮ್ಮಣ್ಣ ಸಭೆಯಲ್ಲಿ ಒತ್ತಾಯಿಸಿದರು. ತಹಶೀಲ್ದಾರ್ ತುಷಾರ ಬಿ.ಹೊಸೂರು ಸೂಕ್ತ ಕ್ರಮದ ಭರವಸೆ ನೀಡಿದರು.
ಮುಖಂಡ ಪ್ರಭಾಕರ್ ಮಾತನಾಡಿ, ಕೆಂಗಲಹಳ್ಳಿ ಗ್ರಾಮದಲ್ಲಿ ದಲಿತರಿಗೆ ಸ್ಮಾಶನದ ಸಮಸ್ಯೆ ಇದ್ದು, ಅಲ್ಲಿ ಜಾಗ ಕೊಡುವುದನ್ನು ಬಿಟ್ಟು ಪಕ್ಕದ ಬನ್ನಿಕೋಡು ಗ್ರಾಮದಲ್ಲಿ ಜಾಗ ಕೊಡಲಾಗಿದೆ ಎಂದು ದೂರಿದರು. ಸರ್ಕಾರಿ ನಿಯಮದಂತೆ ಗ್ರಾಮದ 3 ಕಿ.ಮೀ. ವ್ಯಾಪ್ತಿಯಲ್ಲಿ ಜಾಗ ಕೊಡಬಹುದಾಗಿದ್ದು, ಆ ವ್ಯಾಪ್ತಿಯಲ್ಲಿ ಬೇರೆ ಗ್ರಾಮಗಳು ಬಂದರೆ ಅಲ್ಲಿಯೂ ಜಾಗ ಕೊಡಬಹುದು. ಆದರೂ ಮುಂದಿನ ದಿನಗಳಲ್ಲಿ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪಟ್ಟಣದ ಮಲ್ಲಪ್ಪ ಕಾಂಪ್ಲೆಕ್ಸ್‌ನ 2ನೇ ಅಂತಸ್ತಿನಲ್ಲಿ ನೋಂದಣಿ ಕಚೇರಿ ಹಾಗೂ ಸಿಡಿಪಿಒ ಕಚೇರಿಗಳಿದ್ದು, ಲಿಫ್ಟ್ ಇಲ್ಲದ ಕಾರಣ ವೃದ್ಧರಿಗೆ ತೊಂದರೆಯಾಗುತ್ತಿದೆ. ತಕ್ಷಣ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು. ತಾ.ಪಂ ಇಒ ಕೆ.ಸಿ. ಮಲ್ಲಿಕಾರ್ಜುನ, ಬಿಇಒ ಜಿ.ಇ. ರಾಜೀವ್, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.