Advertisement

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸದ್ಯದಲ್ಲೇ‌ ಪ್ರಾರಂಭ: ಸಚಿವ ಸುರೇಶ್ ಕುಮಾರ್

01:48 PM Apr 30, 2021 | Team Udayavani |

ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಅತಿ ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

Advertisement

ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕರ್ನಾಟಕ‌ ರಾಜ್ಯ ಸಿವಿಲ್ ಸೇವೆಗಳು-ಶಿಕ್ಷಕರ‌ ವರ್ಗಾವಣೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಸಚಿವ ಸಂಪುಟದ ನಿರ್ಣಯವನ್ನು ರಾಜ್ಯಪಾಲರು ಅನುಮೋದಿಸಿದ್ದು, ಈ ಕುರಿತಂತೆ ಅಧ್ಯಾದೇಶವನ್ನು ಅಧಿಕೃತ ರಾಜ್ಯಪತ್ರದ ಮೂಲಕ ಪ್ರಕಟಿಸಲು ಕ್ರಮ ವಹಿಸಲಾಗಿದೆ ಎಂದಿದ್ದಾರೆ.

2019-20ನೇ ಸಾಲಿನಲ್ಲಿ ಕಡ್ಡಾಯ-ಹೆಚ್ಚುವರಿ ವರ್ಗಾವಣೆಗೊಳಗಾದ ಶಿಕ್ಷಕರಿಗೆ ಒಂದು ಬಾರಿ ವಿಶೇಷ ಅವಕಾಶ ಜಾರಿಯಲ್ಲಿಡಬೇಕು. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ತಾಲ್ಲೂಕು/ಜಿಲ್ಲೆಯಲ್ಲಿ ಲಭ್ಯವಿರುವ ಹುದ್ದೆಗಳಿಗೆ ಮೊದಲ ಆದ್ಯತೆಯ ವರ್ಗಾವಣೆ ಅವಕಾಶವನ್ನು ನೀಡಲು ಸುಗ್ರೀವಾಜ್ಞೆಯಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಶಿಕ್ಷಕ ಮಿತ್ರ : ವರ್ಗಾವಣೆ ಕೋರಿ ಸಲ್ಲಿಕೆಯಾಗಿರುವ ಸುಮಾರು ಎಪ್ಪತ್ತೆರಡು ಸಾವಿರ ಅರ್ಜಿಗಳನ್ನು ಶಿಕ್ಷಕ ಮಿತ್ರ ಆಪ್ ಮೂಲಕವೇ ನಿರ್ವಹಿಸಿ ಕೌನ್ಸೆಲಿಂಗ್  ಪ್ರಕ್ರಿಯೆಯನ್ನು ಸಂಪೂರ್ಣ ಅನ್ ಲೈನ್ ಮೂಲಕವೇ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಶಿಕ್ಷಕರು ಭೌತಿಕವಾಗಿ‌ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ‌ ಪಾಲ್ಗೊಳ್ಳಬಾರದು, ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿರಬೇಕು, ಯಾವುದೇ ದೂರು ದುಮ್ಮಾನಗಳನ್ನು‌ ಸಮರ್ಪಕವಾಗಿ ನಿರ್ವಹಿಸುವ ಸದೃಢ ವ್ಯವಸ್ಥೆ ಜಾರಿಯಲ್ಲಿಡಬೇಕು ಹಾಗೂ ಇಡೀ ಪ್ರಕ್ರಿಯೆ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

Advertisement

ಇದನ್ನೂ ಓದಿ:ಜೀವ ಬೆದರಿಕೆಯಿದ್ದರೂ ಪೊಲೀಸ್ ಭದ್ರತೆ ನಿರಾಕರಿಸಿದ ನಟ ಸಿದ್ಧಾರ್ಥ್

ಕಡ್ಡಾಯ-ಹೆಚ್ಚುವರಿ ವರ್ಗಾವಣೆಯಿಂದ ಸುಮಾರು‌ ಮೂರೂವರೆ ಸಾವಿರ ಶಿಕ್ಷಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಅವರಿಗೆ ಅವಕಾಶ ಕಲ್ಪಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ನ್ಯಾಯಾಲಯದ ಆಜ್ಞೆಯನ್ನು ಅನುಸರಿಸುವ, ಸಂಕಷ್ಟದಲ್ಲಿರುವ ಶಿಕ್ಷಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅತಿ ಶೀಘ್ರ ಅವಧಿಯಲ್ಲಿ ಸುಗ್ರೀವಾಜ್ಞೆಯನ್ನು ಹೊರತರಲು ಕ್ರಮ ವಹಿಸಲಾಗಿದ್ದು, ಸರ್ಕಾರದ‌ ಈ ಕಾಳಜಿಯನ್ನು ಅರ್ಥೈಸಿಕೊಂಡು ಶಿಕ್ಷಕ‌ ಸಮುದಾಯ ಅತ್ಯಂತ ಶಿಕ್ಷಕ ಸ್ನೇಹಿಯಾದ ವರ್ಗಾವಣಾ‌ ಪ್ರಕ್ರಿಯೆಯನ್ನು ಅಡೆತಡೆಗಳಿಲ್ಲದೇ‌ ಪೂರ್ಣಗೊಳಿಸಲು ಎಲ್ಲ ಸಹಕಾರ‌ ನೀಡಬೇಕು. ಶಿಕ್ಷಕ ಸಂಘಟನೆಗಳು‌ ಕ್ರಿಯಾಶೀಲವಾಗಿ ಕೆಲಸ ಮಾಡಿ ಸರ್ಕಾರದ ನಿಲುವನ್ನು ಎಲ್ಲ ಶಿಕ್ಷಕರಿಗೆ ಅರ್ಥೈಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next