ಬೆಂಗಳೂರು : ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಕಾಯ್ದೆ ತಿದ್ದುಪಡಿ ವಿಧೇಯಕ ಅಧಿವೇಶನದಲ್ಲಿ ಮಂಡನೇ ಆಗದೆ ಇರುವುದರಿಂದ ಈ ವರ್ಷ ವರ್ಗಾವಣೆ ಪ್ರಕ್ರಿಯೆ ನಡೆಯುವುದು ಕಷ್ಟವಿದೆ.
ಉಪನ್ಯಾಸಕರ ವರ್ಗಾವಣೆಗೆ ಸಂಬಂಧಿಸಿದಂತೆ ಕಾಯ್ದೆಗೆ ತಿದ್ದುಪಡಿ ತರಬೇಕು ಮತ್ತು ವರ್ಗಾವಣೆ ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿ ಇತ್ತೀಚೆಗೆ ರಾಜ್ಯ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರ ಸಂಘದಿಂದ ಇಲಾಖೆಯ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದ್ದರು.
ಹಳೇ ಕಾಯ್ದೆ ಹಾಗೂ ನಿಯಮದಡಿ ವರ್ಗಾವಣೆ ನಡೆಸಲು ಉಪನ್ಯಾಸಕರು ಹಾಗೂ ಸಂಘದಿಂದ ತೀವ್ರ ವಿರೋಧವಿದೆ. ಕಾಯ್ದೆ ತಿದ್ದುಪಡಿ ಮಾಡಿ, ಹೊಸದಾಗಿ ನಿಯಮ ರಚಿಸಲು ವಿದೇಯಕ ತಿದ್ದುಪಡಿಗೆ ಸರ್ಕಾರ ಅಧಿವೇಶನದಲ್ಲಿ ಮಂಡಿಸಿ, ಉಭಯ ಸದನದಿಂದ ಒಪ್ಪಿಗೆ ಪಡೆಯಬೇಕಿತ್ತು. ಆದರೆ, ಮಂಡನೆಯಾಗಿರಲಿಲ್ಲ. ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟದ ಒಪ್ಪಿಗೆಯೂ ಅಗತ್ಯವಿದೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ವರ್ಗಾವಣೆ ನಡೆಯುವುದು ಕಷ್ಟಸಾಧ್ಯ ಎಂದು ಹೇಳಾಗುತ್ತಿದೆ.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 504 ಮಂದಿಯಲ್ಲಿ ಪ್ರಕರಣ ಪತ್ತೆ : 893 ಸೋಂಕಿತರು ಗುಣಮುಖ
2017ಕ್ಕೂ ಮೊದಲು ಶಾಲಾ ಶಿಕ್ಷಕರ ವರ್ಗಾವಣೆ ಜತೆಗೆ ಪಿಯು ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿತ್ತು. ಈಗ ಶಾಲಾ ಶಿಕ್ಷಕರ ವರ್ಗಾವಣೆಗೆ ಪ್ರತ್ಯೇಕ ಕಾಯ್ದೆ ರೂಪಿಸಲಾಗಿದೆ. ಆದರೆ, ಪಿಯು ಉಪನ್ಯಾಸಕರಿಗೆ ಹಳೇ ಕಾಯ್ದೆಯಂತೆ ವರ್ಗಾವಣೆ ನಡೆಸಲಾಗುತ್ತಿದೆ. ಹೀಗಾಗಿ ಪಿಯು ಉಪನ್ಯಾಸಕರ ವರ್ಗಾವಣೆ ಪ್ರಮಾಣ ಹೆಚ್ಚಿಸುವ ಸಂಬಂಧ ಕಾಯ್ದೆಗೆ ಯಾವ ರೀತಿ ತಿದ್ದುಪಡಿ ತರಬೇಕು ಎಂಬುದರ ವಿವರವಾದ ಮಾಹಿತಿ ಆಧಾರದಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಪಿಯು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಅದರಂತೆ ಪಿಯು ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಸದ್ಯ ಸರ್ಕಾರದಿಂದ ಈ ಸಂಬಂಧ ಮುಂದಿನ ಪ್ರಕ್ರಿಯೆ ನಡೆದಿಲ್ಲ ಎಂದು ತಿಳಿದು ಬಂದಿದೆ.
ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರುವ ಪ್ರಕ್ರಿಯೆ ವಿಳಂಬವಾಗುತ್ತಿರುವ ಜತೆಗೆ ಶೈಕ್ಷಣಿಕ ವರ್ಷವೂ ಆರಂಭವಾಗಿರುವುದರಿಂದ ಹೊಸ ಕಾಯ್ದೆ ಬಂದರೂ, ನಿಯಮ ರೂಪಿಸಿ, ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಕನಿಷ್ಠ 3ರಿಂದ 6 ತಿಂಗಳು ಬೇಕಾಗುತ್ತದೆ. ಅಷ್ಟರೊಳಗೆ 2021-22ನೇ ಶೈಕ್ಷಣಿಕ ವರ್ಷವೂ ಕೊನೆಯ ಹಂತ ತಲುಪಲಿದೆ. ಹೀಗಾಗಿ ಈ ವರ್ಷವೂ ಪಿಯು ಉಪನ್ಯಾಸಕರಿಗೆ ವರ್ಗಾವಣೆ ಪಡೆಯಲು ಕಷ್ಟಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಉಪನ್ಯಾಸಕರ ವರ್ಗಾವಣೆ ಸಂಬಂಧ ಕಾಯ್ದೆಗೆ ಆಗಬೇಕಿರುವ ತಿದ್ದುಪಡಿ ಕುರಿತಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ಧೇವೆ. ಸರ್ಕಾರದಿಂದಲೇ ಮುಂದಿನ ಕ್ರಮ ಆಗಬೇಕು.
-ಆರ್.ಸ್ನೇಹಲ್, ನಿರ್ದೇಶಕಿ, ಪಿಯು ಇಲಾಖೆ