ಚಾಮರಾಜನಗರ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ನಾಲ್ಕನೇ ದಿನವಾದ ಶನಿವಾರ ಚಾಮರಾಜನಗರ ವಿಭಾಗದಿಂದ 61 ಸರ್ಕಾರಿ ಸಾರಿಗೆ ಬಸ್‌ಗಳು ಕಾರ್ಯಾಚರಣೆ ನಡೆಸಿವೆ. 150 ಮಂದಿ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ.
ಏತನ್ಮಧ್ಯೆ, ಮುಷ್ಕರಕ್ಕೆ ಕರೆ ನೀಡಿದ್ದ ಹಾಗೂ ಮುಷ್ಕರದ ನೇತೃತ್ವ ವಹಿಸಿದ್ದ ವಿಭಾಗದ 25 ಮಂದಿ ನೌಕರರನ್ನು ಪುತ್ತೂರು, ಕೋಲಾರ, ದಾವಣಗೆರೆ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿ, ಚಾಮರಾಜನಗರ ವಿಭಾಗದಿಂದ ಶನಿವಾರ 61 ಬಸ್‌ಗಳು ಕಾರ್ಯಾಚರಣೆ ನಡೆಸಿವೆ. ಚಾಲಕರು, ನಿರ್ವಾಹಕರು ಸೇರಿ 150 ಮಂದಿ ಶನಿವಾರ ಕರ್ತವ್ಯಕ್ಕೆ ಹಾಜರಾಗಿದ್ಧಾರೆ ಎಂದು ತಿಳಿಸಿದರು.
ಶನಿವಾರ 61 ಕೆಎಸ್‌ಆರ್‌ಟಿಸಿ ಬಸ್‌ಗಳು ಮೈಸೂರು, ಗುಂಡ್ಲುಪೇಟೆ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲಕ್ಕೆ ಸಂಚರಿಸಿವೆ. ಸಂಜೆ ಬೆಂಗಳೂರಿಗೆ ಎರಡು ಬಸ್‌ಗಳು ಸಂಚರಿಸಿವೆ. ಇದರ ಜೊತೆಗೆ ಖಾಸಗಿ ಬಸ್‌ಗಳು ಸಹ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ವಿವಿಧೆಡೆಗೆ ಸಂಚಾರ ನಡೆಸಿವೆ.
ಹೀಗಾಗಿ ಮುಷ್ಕರದ ನಾಲ್ಕನೇ ದಿನ ಪ್ರಯಾಣಿಕರಿಗೆ ಹೆಚ್ಚಿನ ಅನಾನುಕೂಲವಾಗಲಿಲ್ಲ. ಮುಷ್ಕರ ನಡೆಸುತ್ತಿರುವ ನೌಕರರನ್ನು ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ಭಾನುವಾರ ಇನ್ನಷ್ಟು ಮಂದಿ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಉದಯವಾಣಿಗೆ ತಿಳಿಸಿದರು.