Advertisement

ಮಂಡ್ಯ ವಿಭಾಗದ 17 ಸಾರಿಗೆ ನೌಕರರ ವರ್ಗಾವಣೆ

04:45 PM Apr 10, 2021 | Team Udayavani |

ಮಂಡ್ಯ : ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಮಂಡ್ಯ ವಿಭಾಗದ ಸಾರಿಗೆ ಇಲಾಖೆಯ ಅಧಿಕಾರಿಗಳು 17 ಮಂದಿ ನೌಕರರನ್ನು ವರ್ಗಾವಣೆ ಮಾಡಿದ್ದಾರೆ.

Advertisement

14 ಮಂದಿ ಚಾಲಕ ಕಂ ನಿರ್ವಾಹಕರನ್ನು ಕೋಲಾರ ಜಿಲ್ಲೆಗೆ ಹಾಗೂ 3 ಮಂದಿ ಮೆಕ್ಯಾನಿಕ್‌ ಗಳನ್ನು ರಾಮನಗರ ಜಿಲ್ಲೆಗೆ ವರ್ಗಾವಣೆ ಮಾಡಿ ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್‌ಕುಮಾರ್ ಆದೇಶ ಹೊರಡಿಸಿದ್ದಾರೆ.

ಸಾಮಾಜಿಕ ಜಾಲತಾಣ ದುರ್ಬಳಕೆ ಕಾರಣ: 17 ಮಂದಿ ನೌಕರರು ಸಾಮಾಜಿಕ ಜಾಲತಾಣಗಳಾದ ವಾಟ್ಸಾಫ್, ಫೇಸ್‌ ಬುಕ್‌ ಗಳಲ್ಲಿ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದಂತೆ ಹರಿ ಬಿಡುತ್ತಿದ್ದರು. ಅಲ್ಲದೆ, ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗಳ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಎಂದು ಬಿಂಬಿಸಿ ಹರಿಬಿಡುತ್ತಿದ್ದರು. ಜತೆಗೆ ಅವರ ಕುಟುಂಬಸ್ಥರಿಗೆ ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದು ಬಂದಿದೆ.

ಕಳೆದ ನಾಲ್ಕು ದಿನಗಳಿಂದ 6ನೇ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲಿಯೇ ಉಳಿದುಕೊಳ್ಳುವ ಮೂಲಕ ಮುಷ್ಕರ ನಡೆಸುತ್ತಿದ್ದಾರೆ.

ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳು ದೂರವಾಣಿ ಕರೆ ಮೂಲಕ ಹಾಗೂ ಮನೆಗಳಿಗೆ ಭೇಟಿ ನೀಡಿ ಮನವೊಲಿಸುವ ಕೆಲಸ ಮಾಡುತ್ತಿದ್ದರು. ಇದುವರೆಗೂ ಜಿಲ್ಲೆಯಲ್ಲಿ ಸುಮಾರು 20 ಬಸ್‌ ಗಳು ಸಂಚಾರ ಆರಂಭಿಸಿದ್ದವು.

Advertisement

1.80 ಕೋಟಿ ರೂ. ನಷ್ಟ:  ಜಿಲ್ಲೆಯಾದ್ಯಂತ 250ಕ್ಕೂ ಹೆಚ್ಚು ಬಸ್‌ ಗಳು ಪ್ರತಿನಿತ್ಯ ಸಂಚರಿಸುತ್ತವೆ. ಮುಷ್ಕರದಿಂದಾಗಿ ಪ್ರತಿ ದಿನ 45 ಲಕ್ಷ ರೂ.ನಂತೆ ಕಳೆದ ನಾಲ್ಕು ದಿನಗಳಿಂದ 1.80 ಕೋಟಿ ರೂ. ನಿಗಮಕ್ಕೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಖಾಸಗಿ ಬಸ್‌ಗಳ ದರ್ಬಾರ್:  ಮಂಡ್ಯ ನಗರದ ಸಾರಿಗೆ ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ ಸಾರಿಗೆ ನಿಲ್ದಾಣಗಳು ಖಾಸಗಿ ಬಸ್‌ಗಳ ನಿಲ್ದಾಣವಾಗಿ ಮಾರ್ಪಟ್ಟಿವೆ. ಖಾಸಗಿ ಬಸ್, ಮಿನಿ ಬಸ್, ಟಿಟಿ ಗಾಡಿಗಳ ಅಡ್ಡವಾಗಿವೆ. ಸಾರಿಗೆ ಬಸ್ ನಿಲ್ದಾಣದಲ್ಲಿಯೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿವೆ.

ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕಿಮ್ಮತ್ತು:  ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ. ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರು ಪ್ರಯಾಣಿಕರಿಂದ ಯಾವುದೇ ರೀತಿಯ ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ. ಮಾಮೂಲಿ ದರದಂತೆ ತೆಗೆದುಕೊಳ್ಳಬೇಕು ಎಂದು ಖಾಸಗಿ ಬಸ್‌ಗಳ ಮಾಲೀಕರಿಗೆ ಸೂಚನೆ ನೀಡಿದ್ದರು. ಆದರೆ ಅದು ಪಾಲನೆಯಾಗುತ್ತಿಲ್ಲ. ಪ್ರಯಾಣಿಕರಿಂದ ಹೆಚ್ಚುವರಿ ಹಣ ಪಡೆಯುತ್ತಿರುವುದು ದಿನನಿತ್ಯ ಸರ್ವೇ ಸಾಮಾನ್ಯವಾಗಿದೆ.

ಖಾಸಗಿ ಬಸ್‌ ಗಳತ್ತ ಸುಳಿಯದ ಪ್ರಯಾಣಿಕರು:  ದೂರದ ಊರುಗಳಿಗೆ ತೆರಳುವವರು ಹಾಗೂ ಹೋಗಲೇಬೇಕಾದ ಅನಿವಾರ್ಯತೆ ಇರುವವರು ತೆರಳುತ್ತಿದ್ದಾರೆ. ಆದರೆ ಬಹುತೇಕ ಮಂದಿ ಸಾರಿಗೆ ಬಸ್ ಅವಲಂಬಿತರು ಖಾಸಗಿ ಬಸ್‌ಗಳತ್ತ ಮುಖ ಮಾಡುತ್ತಿಲ್ಲ. ಒಂದು ಖಾಸಗಿ ಬಸ್ ಸಂಪೂರ್ಣ ಭರ್ತಿಯಾಗಬೇಕಾದರೆ ಸುಮಾರು 1ರಿಂದ 2 ತಾಸು ಕಾಯುವ ಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next