ಬೆಂಗಳೂರು: ಯಾವುದೇ ತಾಲೂಕಿನಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ.25ರಷ್ಟು ಶಿಕ್ಷಕರಿಗೆ ವರ್ಗಾವಣೆಗೆ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದ್ದರೂ ಪತಿ-ಪತ್ನಿ ಪ್ರಕರಣಗಳಲ್ಲಿ ಹೆಚ್ಚಿನ ಮಂದಿಗೆ ಉಪಯೋಗವಾಗುತ್ತಿಲ್ಲ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆಯು ಈವರೆಗೆ ತಾಲೂಕೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳಲ್ಲಿ ಶೇ.25ರಷ್ಟು ಮಂದಿಗೆ ವರ್ಗಾವಣೆ ಅವಕಾಶ ನೀಡಿತ್ತು. ಇತ್ತೀಚೆಗೆ ಸರಕಾರವು ಈ ನಿಯಮವನ್ನು ಬದಲಾಯಿಸಿ ಒಟ್ಟಾರೆ ಮಂಜೂರಾದ ಹುದ್ದೆಗಳಲ್ಲಿ ಶೇ.25 ಹುದ್ದೆಗಳಿಗೆ ವರ್ಗಾವಣೆಗೆ ಅನುವು ಮಾಡಿಕೊಟ್ಟಿದೆ.
ಆದರೆ, ಗ್ರಾಮೀಣ ಪ್ರದೇಶದಲ್ಲಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೇರಿ ವಿವಿಧ 51 ತಾಲೂಕಿನಲ್ಲಿ ಪತಿ-ಪತ್ನಿಯರ ಪ್ರಕರಣಗಳಲ್ಲಿ ಶಿಕ್ಷಕರ ವರ್ಗಾವಣೆಗೆ ಅವಕಾಶ ಇಲ್ಲದಂತಾಗಿದೆ. ಪತಿ-ಪತ್ನಿಯರು ವರ್ಗಾವಣೆ ಮಾಡಿಸಿಕೊಂಡು ಒಂದೇ ತಾಲೂಕಿನಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಉದ್ದೇಶದಿಂದ ವರ್ಗಾವಣೆ ಕೋರಿದ್ದು, ಶಿಕ್ಷಕರ ಕೊರತೆ ಇರುವುದರಿಂದ ಸರಕಾರ ಸೌಲಭ್ಯ ನೀಡಿದ್ದರೂ ಪ್ರಯೋಜನ ಇಲ್ಲದಂತಾಗಿದೆ.
ಹಿಂದಿ ಶಿಕ್ಷಕರು, ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕೊರತೆ ಇರುವುದರಿಂದ ಈ ಶಿಕ್ಷಕರು ಸಮರ್ಪಕವಾಗಿ ವರ್ಗಾವಣೆಗೆ ಅವಕಾಶ ಸಿಗದೆ ಹಲವಾರು ಶಿಕ್ಷಕ ಪತಿ-ಪತ್ನಿಯರು ಒಂದೇ ತಾಲೂಕಿಗೆ ವರ್ಗಾವಣೆಯಾಗದೆ ದೂರ ಇರುವಂತಾಗಿದೆ.
ಶಿಕ್ಷಣ ಇಲಾಖೆಯು ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ತುಂಬದಿದ್ದರೆ, ವರ್ಗಾವಣೆ ನೀತಿಯನ್ನು ಎಷ್ಟು ಶಿಕ್ಷಕ ಸ್ನೇಹಿಯಾಗಿ ಮಾರ್ಪಡಿಸಿದರೂ ಪ್ರಯೋಜನವಿಲ್ಲ ಎಂದು ವರ್ಗಾವಣೆ ವಂಚಿತರು ಹೇಳುತ್ತಿದ್ದಾರೆ.