Advertisement

ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ವಹಿವಾಟು ಶೀಘ್ರ

06:29 AM Feb 16, 2019 | Team Udayavani |

ಬೆಂಗಳೂರು: ವಿವಾದಗಳಿಗೆ ಗುರಿಯಾಗಿ ಕೆಲ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಯನಗರ 4ನೇ ಬ್ಲಾಕ್‌ನಲ್ಲಿರುವ ಸರ್‌.ಎಂ.ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣಕ್ಕೆ ಕೊನೆಗೂ ಉದ್ಘಾಟನೆ ಭಾಗ್ಯ ಸಿಕ್ಕಿದ್ದು, ಶೀಘ್ರವೇ ವ್ಯಾಪಾರ ವಹಿವಾಟು ಆರಂಭವಾಗಲಿದೆ. 

Advertisement

ನಾಲ್ಕು ವರ್ಷಗಳ ಹಿಂದೆ ನೂತನವಾಗಿ ನಿರ್ಮಾನಗೊಂಡ ವಾಣಿಜ್ಯ ಸಂಕೀರ್ಣದಲ್ಲಿ 205 ಮಳಿಗೆಗಳಿದ್ದು, ಹಂಚಿಕೆ ಪ್ರಕ್ರಿಯೆ ವಿಳಂಬದಿಂದಾಗಿ ಪಾಲಿಕೆ, ಬಿಡಿಎಗೆ ಬಿಡಿಗಾಸು ವರಮಾನ ಇಲ್ಲದಂತಾಗಿತ್ತು. ಮತ್ತೂಂದೆಡೆ ಪಾಲಿಕೆಯಿಂದ ಮಳಿಗೆಗಳ ಹಂಚಿಕೆಯಾದರೂ ಮಳಿಗೆದಾರರು ಸ್ಥಳಾಂತರಗೊಳ್ಳದೆ ಬೀದಿ ಬದಿ ವ್ಯಾಪಾರ ಮುಂದುವರಿಸಿದ್ದರು. 

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಲೋಕಾಯುಕ್ತರು, ವಾಣಿಜ್ಯ ಸಂಕೀರ್ಣವನ್ನು ಬಿಡಿಎಯಿಂದ ವಶಕ್ಕೆ ಪಡೆದು ಬಾಡಿಗೆ ವಸೂಲಿ ಮಾಡುವಂತೆ ಹಾಗೂ ಮಳಿಗೆಗಳನ್ನು ಅರ್ಹರಿಗೆ ಹಂಚಿಕೆ ಮಾಡಿ ಆದಾಯ ಪಡೆಯುವಂತೆ ಬಿಬಿಎಂಪಿಗೆ ಸೂಚಿಸಿದ್ದರು. ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಲೋಕಾಯುಕ್ತರ ಆದೇಶವನ್ನು ಬಿಬಿಎಂಪಿ ಪಾಲಿಸಿದೆ. 

ಶುಕ್ರವಾರ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಮೇಯರ್‌ ಗಂಗಾಂಬಿಕೆ ಅವರು, ನೂತನ ಸಂಕೀರ್ಣದಲ್ಲಿ ಹೊಸದಾಗಿ 205 ಮಳಿಗೆಗಳನ್ನು ನಿರ್ಮಿಸಲಾಗಿದೆ. ಅದರಂತೆ ಹಳೆಯ ಕಟ್ಟಡದಲ್ಲಿದ್ದ ಎಲ್ಲ ವ್ಯಾಪಾರಿಗಳನ್ನು ತಿಂಗಳೊಳಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದರು. 

ಎಲ್ಲ ವ್ಯಾಪಾರಿಗಳು ಹೊಸ ಕಟ್ಟಡಲ್ಲಿರುವ ಮಳಿಗೆಗಳಿಗೆ ಸ್ಥಳಾಂತರಗೊಂಡ ನಂತರದಲ್ಲಿ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ತೀರ್ಮಾನಿಸಿದ್ದು, ಕಾಮಗಾರಿಯನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು. 

Advertisement

ಪಾಲಿಕೆ ಸದಸ್ಯ ನಾಗರಾಜು ಮಾತನಾಡಿ, ಹೊಸ ಕಟ್ಟಡದಲ್ಲಿ ಒಟ್ಟು 205 ಮಳಿಗೆಗಳಿದ್ದು, ತರಕಾರಿ, ಬಟ್ಟೆ ಅಂಗಡಿ ಸೇರಿ ಎಲ್ಲ ವ್ಯಾಪಾರಿಗಳಿಗೆ ಹೊಸ ಕಟ್ಟಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಳೆಯ ಕಟ್ಟಡ ಖಾಲಿಯಾದ ಬಳಿಕ ಮೂರು ಚಿತ್ರಮಂದಿರಗಳು, 7500 ಜನರು ಕುಳಿತುಕೊಳ್ಳುವ ಒಂದು ಸಭಾಂಗಣ, 750 ಕಾರು ಮತ್ತು 1,500 ದ್ವಿಚಕ್ರ ವಾಹನ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. 

ಮೂರು ಸಂಕೀರ್ಣ ನಿರ್ಮಾಣ: ಬಿಡಿಎ ಮತ್ತು ಬಿಬಿಎಂಪಿ ನಾಲ್ಕು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಿದ್ದವು. ಅದರಂತೆ ಇದೀಗ ಬ್ಲಾಕ್‌-1 ವಾಣಿಜ್ಯ ಸಂಕೀರ್ಣದ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಬ್ಲಾಕ್‌ಗಳಲ್ಲಿರುವ ವ್ಯಾಪಾರಿಗಳು ಬ್ಲಾಕ್‌ -1ರ ಮಳಿಗೆಗಳಿಗೆ ಸ್ಥಳಾಂತರಗೊಂಡ ಬಳಿಕ ಉಳಿದ ಮೂರು ಬ್ಲಾಕ್‌ಗಳಲ್ಲಿನ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ, ಸಂಕೀರ್ಣ ನಿರ್ಮಿಸಲು ಪಾಲಿಕೆಯ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next