ಅಲೋಶಿಯಸ್ ಕಾಲೇಜಿನಲ್ಲಿ ಜರಗಿದ ಗಭಾಸ್ಕರ-2019ರಲ್ಲಿ ಪ್ರದರ್ಶಿಸಿದ ಸವಿತಾರಾಣಿ ಪಾಂಡಿಚೇರಿ ನಿರ್ದೇಶಿಸಿದ ಟ್ರಾನ್ಸ್‌ನೇಶನ್ ಸಮಕಾಲೀನ ರಾಜಕೀಯದ ಹುಳುಕುಗಳನ್ನು ತೆರೆದಿಡುತ್ತದೆ.
ಇಡೀ ರಾಷ್ಟ್ರ ಇಂದು ಒಂದು ರೀತಿಯ ಬದಲಾವಣೆಯ ಪರ್ವಕ್ಕೆ ವೇಗವಾಗಿ ತೆರೆದುಕೊಳ್ಳುವ ಧಾವಂತದಲ್ಲಿದೆ. ಆಡಳಿತ ನಡೆಸುವ ಪಕ್ಷ ಏಕಧ್ವಜ, ಏಕ ದೇಶ ಎಂಬ ಸಂಹಿತೆಯಂತೆ ಏಕ ವಸ್ತ್ರ ಸಂಹಿತೆಯನ್ನು ತರುವ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವುದರೊಂದಿಗೆ, ಯಾವುದೇ ಸಿದ್ಧ ಪಠ್ಯವಿಲ್ಲದ ನಾಟಕ ಟಾನ್ಸ್‌ನೇಶನ್ ಅನಾವರಣಗೊಳ್ಳುತ್ತದೆ. ಕಾಮಸೂತ್ರವನ್ನು ವಿಶ್ವಕ್ಕೆ ನೀಡಿದ ದೇಶ, ವಿವಿಧತೆಯಿಂದಲೇ ವಿದೇಶಿಗರೂ ಆಸ್ಥೆಯಿಂದ ಗುರುತಿಸುವ ದೇಶ ಇಂಥ ಏಕ ವಸ್ತ್ರ ಸಂಹಿತೆಯನ್ನು ಆಲೋಚನೆ ಮಾಡುವುದೇ ಅಸಂಬದ್ಧ, ಅಸಂಗತ ಎಂದು ವಿರೋಧ ಪಕ್ಷ ವಿರೋಧಿಸುವುದರೊಂದಿಗೆ ಸದನದ ಬಾವಿಗಿಳಿಯುತ್ತಾರೆ ಜನ ನಾಯಕರು. ಸೆನ್ಸಾರ್ ನಿಯಮವನ್ನು ಸಂವಿಧಾನದೊಳಗೆ ತರುವ ಮೂಲಕ ಅವರವರ ಮೂಗಿನ ನೇರಕ್ಕೆ ಕಾನೂನನ್ನು ತಿರುಗಿಸುವ ವಿಡಂಬನಾತ್ಮಕ ಸನ್ನಿವೇಶ ಹಾಸ್ಯವನ್ನು ಉಕ್ಕಿಸುತ್ತಾ, ರಾಜಕಾರಣದ ನೈತಿಕ ಅಧಃಪತನವನ್ನು ವಿವರಿಸುತ್ತಾ ಸಾಗುತ್ತದೆ.
ಮುಂದೆ? ನಮ್ಮ ವ್ಯವಸ್ಥೆಯನ್ನು ಶಾಕ್ ನೀಡಿದಂತೆ ತೆರೆದಿಡುತ್ತಾ ಸಾಗುತ್ತದೆ ನಾಟಕ. ಪ್ರತಿಯೊಂದಕ್ಕೂ ಹೆಲ್ಪ್ಲೈನ್ ಇದೆ, ಪ್ರತಿಯೊಂದಕ್ಕೂ ಕಾನೂನಿದೆ, ಪ್ರತಿ ಹೆಜ್ಜೆಯಲ್ಲೂ ರಕ್ಷಣೆಯ ಸ್ಲೋಗನ್ ಇದೆ. ಆದರೆ ಹೆಣ್ಣು ಮಾತ್ರ ಸದಾ ಅತ್ಯಾಚಾರಕ್ಕೊಳಗಾಗುತ್ತಾಳೆ. ಹೆಲ್ಪ… ಮಾಡಿ ಎಂಬ ಆ ಕೂಗು ಎಂತಹ ಎದೆಯಲ್ಲೂ ಕಳವಳ ಹುಟ್ಟಿಸುತ್ತದೆ. ಸೋಗಲಾಡಿ ಸನ್ಯಾಸಿಯ ಮೂಲಕ ಸಮಾಜದ ದುರವಸ್ಥೆಯನ್ನು ಪರಿಣಾಮಕಾರಿಯಾಗಿ ತೆರೆದಿಡುತ್ತಾ, ಅತ್ಯಾಚಾರ ಸಂತ್ರಸ್ತೆಯ ಅಸಹಾಯಕ ಪರಿಸ್ಥಿತಿಯನ್ನು ಕೈ ಮೀರಿದ ಸಹಜ ನಡೆಯಂತೆ ಬಿಂಬಿಸಿ, ನಾಟಕದ ನಡುವೆ ಒಂದು ಆತಂಕದ ಅಂಕವೂ ಸೇರಿಕೊಂಡು, ಪ್ರತಿ ಪ್ರೇಕ್ಷಕನೂ ನಟನಾಗುವ ಅನುಭಾವ ವಿನೂತನ ಅನಿಸುತ್ತದೆ.
ಲೈಲಾ, ಮಜನು ಎಂಬ ಪಾತ್ರಗಳ ಮೂಲಕ ಹೆಣ್ಣಿನ ಶೋಷಣೆಯ ಆಳ ಬಿಚ್ಚಿಡುತ್ತಾ, ಕೊನೆಗೂ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಮರೀಚಿಕೆಯೇ ಆಗುತ್ತದೆ. ನಮ್ಮ ನಾಯಕರು,ಪ್ರಭಾವಿಗಳು, ನ್ಯಾಯ ವ್ಯವಸ್ಥೆ ಎಲ್ಲೆಡೆಯಲ್ಲೂ ಮಹಿಳಾ ಸಬಲೀಕರಣದ ಮಾತಾಡುವ ವ್ಯವಸ್ಥೆ ಮಹಿಳೆಗೆ ನ್ಯಾಯ ಕೊಡುವಲ್ಲಿ ಸೋಲುತ್ತದೆ.ಸೋಲಿನೊಂದಿಗೆ ಆಕೆಗೆಂದೂ ಸಬಲೆಯ ಪಟ್ಟ ಕೊಡದಿರುವ ವ್ಯವಸ್ಥಿತ ಸಂಚು ಗೆಲ್ಲುತ್ತದೆ. ಇದೂ ಸಂವಿಧಾನದ ಚೌಕಟ್ಟಿನಲ್ಲೇ ನಡೆಯುತ್ತದೆ. ಶಾಸಕಾಂಗ ಮತ್ತು ನಮ್ಮ ಕಾನೂನುಗಳು ಇದಕ್ಕೆ ಸಹಕಾರಿಯಾಗುತ್ತವೆ.
ಟ್ರಾನ್ಸ್‌ನೇಶನ್ ಮುಗಿಸಿ ಹೊರ ಬರುವಾಗ ಅನೇಕ ಭಿನ್ನ ಅನುಭವ.ಹೃದಯ ಭಾರ ಭಾರ. ಎಲ್ಲೋ ನಾವೂ ಈ ಅವ್ಯವಸ್ಥೆಯ ಭಾಗವೇನೋ ಎಂಬ ಶಾಕ್. ನಿರ್ದಿಷ್ಟ ಮಾನದಂಡಗಳಿಲ್ಲದೆ, ನಿರ್ದಿಷ್ಟ ಪಠ್ಯವಿಲ್ಲದೆ, ಒಡೆದು ಕಟ್ಟುವಿಕೆಯ ಪ್ರಯೋಗದೊಂದಿಗೆ ಪ್ರದರ್ಶನವಾದ ನಾಟಕ ಇದು. ಪ್ರತಿ ಪಾತ್ರವೂ ನಮ್ಮೊಳಗೊಂದು ನಡುಕದಿಂದ ಕೂಡಿದ ಪ್ರಶ್ನೆ ಸೃಷ್ಟಿಗೆ ಕಾರಣವಾದದ್ದು ಸುಳ್ಳಲ್ಲ. ಈ ಶ್ರೇಯಸ್ಸು ಕಲಾವಿದರಿಗೆ ಮತ್ತು ಒಂದು ತಂಡವಾಗಿ ಪಟ್ಟ ಶ್ರಮಕ್ಕೆ ಕನ್ನಡಿ. ಈ ನಾಟಕದಲ್ಲಿ ಪ್ರದರ್ಶನವಿರುವಲ್ಲಿ ಸ್ಥಳೀಯ ಸಮಸ್ಯೆಗಳನ್ನೆ ಮುಖ್ಯವಾಗಿ ಬಿಂಬಿಸುವ ಮೂಲಕ, ಪ್ರೇಕ್ಷಕನನ್ನು ನಾಟಕದ ಪಾತ್ರಧಾರಿಯಾಗಿಸುವ ವಿಶಿಷ್ಟ ಪ್ರಯತ್ನವೂ ನಡೆಯುತ್ತದೆ.
ಅರೆಹೊಳೆ ಸದಾಶಿವ ರಾವ್