ತಿರುವನಂತಪುರಂ: ಕೇರಳದ ತೃತೀಯ ಲಿಂಗಿ ದಂಪತಿ ಜಿಯಾ ಮತ್ತು ಜಹಾದ್ ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ತೃತೀಯ ಲಿಂಗಿ ಗರ್ಭ ಧರಿಸಿರುವ ದೇಶದ ಮೊದಲ ಪ್ರಕರಣ ಇದಾಗಿರುವುದರಿಂದ ಇಂಟರ್ ನೆಟ್ ನಲ್ಲಿ ನೆಟ್ಟಿಗರನ್ನು ಈ ವಿಷಯ ಸೆಳದಿದೆ. ಕೇರಳದ ಕೋಝಿಕ್ಕೋಡ್ ತೃತೀಯ ಲಿಂಗಿ ದಂಪತಿ ಜಿಯಾ ಮತ್ತು ಜಹಾದ್ ಮೆಟರ್ನಿಟಿ ಫೋಟೋ ಶೂಟ್ ಮಾಡಿಸಿಕೊಂಡು ಗುಡ್ ನ್ಯೂಸ್ ಹಂಚಿಕೊಂಡಿದೆ.
ನಾನು ಹುಟ್ಟಿನಿಂದ ಹೆಣ್ಣಲ್ಲ. ಆದರೆ ಹೆಣ್ತನದ ಕನಸು ನನ್ನಲ್ಲಿತ್ತು. ನನ್ನನ್ನು ʼಅಮ್ಮʼವೆಂದು ಮಗುವೊಂದು ಕರೆದಂತೆ ಆಗುತ್ತಿತ್ತು. ಕಳೆದ ಮೂರು ವರ್ಷದಿಂದ ನಾವು ಜೊತೆಯಾಗಿ ಇದ್ದೇವೆ. ನಮಗೆ ತಂದೆ – ತಾಯಿ ಆಗುವ ಕನಸಿತ್ತು. ಆ ಕನಸು ಈಗ ಈಡೇರುತ್ತಿದೆ. ಮಗು ಹೆಣ್ಣಾಗಲಿ, ಗಂಡಾಗಲಿ ಸಂತಸದಿಂದ ನೋಡಿಕೊಳ್ಳಬೇಕೆಂದು ಎಂದು ಜಿಯಾ ಪಾವಲ್ ಬರೆದುಕೊಂಡಿದ್ದಾರೆ.
ಜಿಯಾ ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾಗಿದ್ದಳು. ಜಹಾದ್ ಹೆಣ್ಣಾಗಿ ಹುಟ್ಟಿ ಪುರುಷನಾಗಿ ಬದಲಾಗಿದ್ದಳು. ಮಹಿಳೆಯಿಂದ ಪುರುಷನಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆ ಸಂದರ್ಭದಲ್ಲಿ ಗರ್ಭಾಶಯ ಮತ್ತು ಇತರ ಕೆಲವು ಅಂಗಗಳನ್ನು ತೆಗೆಯದ ಕಾರಣ ಜಹಾದ್ ಗರ್ಭಧರಿಸಿದ್ದಾರೆ.
ಸದ್ಯ ಇಬ್ಬರಿಗೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಮಾರ್ಚ್ ನಲ್ಲಿ ಜಹಾದ್ ಮಗುವಿಗೆ ಜನ್ಮ ನೀಡಲಿದ್ದಾರೆ.