ನವದೆಹಲಿ: ದೇಶದ್ರೋಹಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದ ಬಗ್ಗೆ ಯಾವತ್ತೂ ಅರ್ಥವಾಗುವುದಿಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಸೋಮವಾರ (ಸೆ.09) ತಿಳಿಸಿದ್ದು, ರಾಹುಲ್ ಗಾಂಧಿ ಅಮೆರಿಕದ ಟೆಕ್ಸಾಸ್ ನ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಟೆಕ್ಸಾಸ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಬಿಜೆಪಿ/ಆರ್ ಎಸ್ ಎಸ್ ಒಂದು ಸಿದ್ಧಾಂತದ ಮೇಲೆ ಆಲೋಚಿಸುತ್ತಿದ್ದು, ಮಹಿಳೆಯರು ಮನೆಯಲ್ಲೇ ಇದ್ದು ಅಡುಗೆ ಮನೆ ನೋಡಿಕೊಳ್ಳಬೇಕು, ಅವರು ಹೆಚ್ಚು ಮಾತನಾಡಬಾರದು ಎಂಬ ನಿಲುವು ಹೊಂದಿದೆ. ಆದರೆ ಮಹಿಳೆಯರಿಗೆ ಏನಾಗಲು ಬಯಸುತ್ತಾರೆ ಅದರಂತೆ ಆಗಲು ಅವಕಾಶ ನೀಡಬೇಕು ಎಂಬುದು ನಮ್ಮ (ಕಾಂಗ್ರೆಸ್) ನಂಬಿಕೆಯಾಗಿದೆ ಎಂದು ಹೇಳಿದ್ದರು.
ಭಾರತೀಯ ಜನತಾ ಪಕ್ಷ ಮತ್ತು ಆರ್ ಎಸ್ ಎಸ್ ನಡುವಿನ ಭಿನ್ನಾಭಿಪ್ರಾಯ ಲೋಕಸಭಾ ಚುನಾವಣೆ ವೇಳೆ ಸ್ಪಷ್ಟವಾಗಿತ್ತು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಂವಿಧಾನದ ಮೇಲೆ ಪ್ರಹಾರ ನಡೆಸುತ್ತಿದ್ದಾರೆ ಎಂಬುದು ಲಕ್ಷಾಂತರ ಭಾರತೀಯರಿಗೆ ಅರಿವಾಗಿತ್ತು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿರುವುದಾಗಿ ವರದಿ ತಿಳಿಸಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಇತಿಹಾಸದ ಪುಟಗಳನ್ನು ರಾಹುಲ್ ಓದಬೇಕು. ಆಗ ಆರ್ ಎಸ್ ಎಸ್ ಅಂದರೆ ಏನು ಎಂಬುದು ನಿಜವಾಗಿ ತಿಳಿಯುತ್ತದೆ. ಆದರೆ ದೇಶದ್ರೋಹಿಗೆ ಆರ್ ಎಸ್ ಎಸ್ ಬಗ್ಗೆ ಅರ್ಥವಾಗುವುದಿಲ್ಲ. ಅಂತಹವರು ವಿದೇಶಕ್ಕೆ ತೆರಳಿ ದೇಶದ ಬಗ್ಗೆ ಟೀಕಿಸುತ್ತಿರುತ್ತಾರೆ ಎಂದು ಗಿರಿರಾಜ್ ಸಿಂಗ್ ತಿರುಗೇಟು ನೀಡಿದ್ದಾರೆ.
“ರಾಹುಲ್ ಗಾಂಧಿ ವಿದೇಶಕ್ಕೆ ಪ್ರಯಾಣಿಸುವುದು ಕೇವಲ ಭಾರತದ ಹೆಸರಿಗೆ ಕಳಂಕ ತರಲು. ರಾಹುಲ್ ಜೀವಮಾನವಿಡೀ ಆರ್ ಎಸ್ ಎಸ್ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅದು ಭಾರತದ ಸಂಸ್ಕೃತಿ ಮತ್ತು ಮೌಲ್ಯದ ಪ್ರತೀಕವಾಗಿದೆ ಎಂದು ಸಚಿವ ಗಿರಿರಾಜ್ ಹೇಳಿದರು.
ರಾಹುಲ್ ಗಾಂಧಿ ಅಮೆರಿಕಕ್ಕೆ ಭೇಟಿ ನೀಡಿದ್ದು, ಅಲ್ಲಿ ಟೆಕ್ಸಾಸ್ ಯೂನಿರ್ವಸಿಟಿ ವಿದ್ಯಾರ್ಥಿಗಳು ಮತ್ತು ಅಮೆರಿಕದ ಸಚಿವರ ಜೊತೆ ಸಂವಹನ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.