Advertisement

ಊಟಕ್ಕಾಗಿ ಪರದಾಡಿದ ತರಬೇತಿಯಲ್ಲಿದ್ದ ಸಿಬ್ಬಂದಿ

03:19 PM May 02, 2023 | Team Udayavani |

ಕೆಜಿಎಫ್‌: ಮೇ 10ರಂದು ನಡೆಯಲಿರುವ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸರ್ಕಾರಿ ನೌಕರರಿಗೆ ಹಮ್ಮಿಕೊಳ್ಳಲಾಗಿದ್ದ ಎರಡನೇ ಸುತ್ತಿನ ತರಬೇತಿ ಕಾರ್ಯಾಗಾರದಲ್ಲಿ ಊಟದ ವ್ಯವಸ್ಥೆಯಲ್ಲಿ ಉಂಟಾದ ಅವ್ಯವಸ್ಥೆಯಿಂದ ಕೆಲ ಕಾಲ ಗೊಂದಲ ವಾತಾವರಣ ಉಂಟಾಗಿ, ತರಬೇತಿಗೆ ಬಂದಿದ್ದ ನೌಕರರು ಊಟಕ್ಕೆ ಪರದಾಡುವಂತಾಯಿತು.

Advertisement

ನಗರದ ಮಹಾವೀರ್‌ ಜೈನ್‌ ಕಾಲೇಜಿನಲ್ಲಿ ಪಿಆರ್‌ಒ, ಎಪಿಆರ್‌ಒ, ಪಿಒ ಸೇರಿದಂತೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿ ಕಾರಿಗಳಿಗೆ ಎರಡನೇ ಸುತ್ತಿನ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ಸುಮಾರು 1200 ಮಂದಿ ತರಬೇತಿಯಲ್ಲಿ ಭಾಗವಹಿಸಿದ್ದರು.

ಕ್ಯಾಂಟೀನ್‌ನಲ್ಲಿ ನೂಕು ನುಗ್ಗಲು: ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತರಬೇತಿ ನಿಗದಿಗೊಳಿಸಲಾಗಿದ್ದು, ಮಧ್ಯಾಹ್ನ ಊಟದ ಸಮಯದಲ್ಲಿ ತರಬೇತಿ ಆಯೋಜಿಸಿದ್ದ ಅ ಧಿಕಾರಿಗಳು ಸಮರ್ಪಕವಾಗಿ ವ್ಯವಸ್ಥೆ ಮಾಡಿಕೊಳ್ಳದ ಪರಿಣಾಮ, ತರಬೇತಿಗೆ ಹಾಜರಾಗಿದ್ದ 1200 ನೌಕರರು ಒಮ್ಮೆಗೆ ಕ್ಯಾಂಟೀನ್‌ಗೆ ನುಗ್ಗಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಯಿತು ಎಂದು ತರಬೇತಿಗೆ ಹಾಜರಾಗಿದ್ದ ಕೆಲ ನೌಕರರು ದೂರಿದ್ದಾರೆ. 1200 ಮಂದಿ ತರಬೇತಿಗೆ ಹಾಜರಾಗಿದ್ದು, ಊಟ ಮಾಡಲು ಆಸನ ವ್ಯವಸ್ಥೆಯನ್ನೂ ಸಹ ಕಲ್ಪಿಸದೇ, ಇದ್ದುದರಿಂದ ನೌಕರರೆಲ್ಲರು ನಿಂತುಕೊಂಡು ಊಟದ ತಟ್ಟೆಗಳನ್ನು ಕೈಯಲ್ಲಿ ಹಿಡಿದುಕೊಂಡು ತಿನ್ನಬೇಕಾಯಿತು ಎಂದು ದೂರಿದ್ದಾರೆ.

ನ್ಯಾಯ ಸಮ್ಮತವಾಗಿ ಕರ್ತವ್ಯ ನಿರ್ವಹಿಸಿ: ಸಹಾಯಕ ಚುನಾವಣಾಧಿಕಾರಿ ಎಚ್‌.ಶ್ರೀನಿವಾಸ್‌ ಮಾತನಾಡಿ, ತರಬೇತಿಗೆ ಹಾಜರಾಗಿದ್ದ ಸಿಬ್ಬಂದಿ ಎಲ್ಲರೂ ಏಕಕಾಲಕ್ಕೆ ಕ್ಯಾಂಟೀನ್‌ಗೆ ಬಂದಿದ್ದರಿಂದ ಸ್ಥಳಾವಕಾಶದ ಕೊರತೆಯಿಂದ ಕೆಲ ಕಾಲ ಗೊಂದಲ ಉಂಟಾಗಿ ಬಳಿಕ ಸರಿಹೋಯಿತು. ಹಂತ ಹಂತವಾಗಿ ನೌಕರರನ್ನು ಊಟಕ್ಕೆ ಕಳುಹಿಸಿದ್ದಲ್ಲಿ ಯಾವುದೇ ಗೊಂದಲ ಗಳಾಗುತ್ತಿರಲಿಲ್ಲ ಎಂದು ತಿಳಿಸಿದರು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡು ತರಬೇತಿ ಪಡೆದುಕೊಂಡಿರುವ ನೌಕರರು ಯಾವುದೇ ಕಾರಣಕ್ಕೂ ಚುನಾವಣಾ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಅವಕಾಶವಿಲ್ಲ. ನೌಕರರು ತಪ್ಪದೇ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿ, ಪಾರದರ್ಶಕ, ನ್ಯಾಯ ಸಮ್ಮತ, ನಿಷ್ಪಕ್ಷಪಾತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸುವಂತೆ ಮನವಿ ಮಾಡಿದರು.

ಅಲ್ಲದೇ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡು ಈಗಾಗಲೇ ಪೋಸ್ಟಲ್‌ ಬ್ಯಾಲೆಟ್‌ ಪಡೆದುಕೊಂಡಿರುವ ನೌಕರರಿಗೆ ಮತ ಚಲಾಯಿಸಲು ತರಬೇತಿ ಕಾರ್ಯಾಗಾರದ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಏಜೆಂಟರು ತಮ್ಮ ಪರವಾಗಿ ಮತ ಚಲಾಯಿಸುವಂತೆ ನೌಕರರಲ್ಲಿ ಮನವಿ ಮಾಡಿದರು.

Advertisement

ಬಾಗಿಲಿಗೆ ಬೀಗ ಹಾಕಿ ತರಬೇತಿ: ತರಬೇತಿಗೆ ಹಾಜರಾದ ಸರ್ಕಾರಿ ನೌಕರರು ಹಾಜರಾತಿಯಲ್ಲಿ ಸಹಿ ಮಾಡಿ, ಪದೇ ಪದೇ ಹೊರಗೆ ಎದ್ದು ಹೋಗುತ್ತಿದ್ದುದರಿಂದ ಕಡ್ಡಾಯವಾಗಿ ತರಬೇತಿಗೆ ಹಾಜರಾಗಲಿ ಎನ್ನುವ ಕಾರಣದಿಂದ ತರಬೇತಿ ಕೇಂದ್ರದ ಬಾಗಿಲಿಗೆ ಬೀಗ ಹಾಕಿ ತರಬೇತಿ ನೀಡಲಾಯಿತು. ಈ ಸಂದರ್ಭದಲ್ಲಿ ಚುನಾವಣಾ ಕಾರಿ ಅತೀಕ್‌ ಉಲ್ಲಾ ಷರೀಫ್‌, ಬಿಇಒ ಚಂದ್ರಶೇಖರ್‌, ಶಿರಸ್ತೇದಾರರಾದ ಜನಾರ್ಧನ ಸಿಂಗ್‌, ಧರ್ಮೇಂದ್ರ ಪ್ರಸಾದ್‌, ಸುರೇಶ್‌, ಕಂದಾಯ ನಿರೀಕ್ಷಕ ರಘುರಾಂ ಸಿಂಗ್‌, ಲೋಕೇಶ್‌, ಮುನಿವೆಂಕಟ ಸ್ವಾಮಿ ಮೊದಲಾ ದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next