Advertisement

ರೇಷ್ಮೆ ಕೃಷಿಯಲ್ಲಿ ನಷ್ಟ ತಪ್ಪಿಸಲು ತರಬೇತಿ ಅಗತ್ಯ

03:49 PM Apr 15, 2022 | Team Udayavani |

ಕೋಲಾರ: ಬೇಸಿಗೆಯಲ್ಲಿ ಅಧಿಕ ಉಷ್ಣಾಂಶದಿಂದಾಗಿ ರೇಷ್ಮೆ ಬೆಳೆಗಾರರು ಬೆಳೆ ನಷ್ಟ ಆಗುವುದನ್ನು ತಪ್ಪಿಸಲು ಹುಳು ಸಾಕಾಣಿಕೆ ಕೊಠಡಿಯಲ್ಲಿ ತೇವಾಂಶ ನಿರ್ವಹಣೆ ಕುರಿತು ಅಗತ್ಯ ಮಾಹಿತಿ ಪಡೆಯಬೇಕು ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಟಿ. ಎಂ.ಕಾಳಪ್ಪ ಸಲಹೆ ನೀಡಿದರು.

Advertisement

ಕೃಷಿ ವಿಜ್ಞಾನ ಕೇಂದ್ರದಲ್ಲಿ ರೇಷ್ಮೆ ಇಲಾಖೆ ಸಹಯೋಗದಲ್ಲಿ ರೇಷ್ಮೆ ಬೆಳೆಗಾರರಿಗೆ “ಬೇಸಿಗೆಯಲ್ಲಿ ಹಿಪ್ಪುನೇರಳೆ ತೋಟ ಹಾಗೂ ದ್ವಿತಳಿ ರೇಷ್ಮೆಹುಳು ನಿರ್ವಹಣೆ’ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೇಸಿಗೆಯಲ್ಲಿ ಹುಳು ಸಾಕಾಣಿಕೆಯ ಸೂಕ್ತ ನಿರ್ವಹಣೆ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆದು ಹಿಪ್ಪುನೇರಳೆ ತೋಟ, ರೇಷ್ಮೆಹುಳು ಸಾಕಾಣಿಕೆ ಹಾಗೂ ಗೂಡು ಉತ್ಪಾದನೆಗೆ ಆದ್ಯತೆ ನೀಡಬೇಕು. ಪ್ರಸ್ತುತ ರೇಷ್ಮೆಗೂಡಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಧಾರಣೆ ಇರುವುದರಿಂದ ಹೆಚ್ಚಿನ ಆದಾಯ ಗಳಿಸಬಹುದೆಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಕೆ.ತುಳಸಿರಾಮ್‌ ಅಧ್ಯಕ್ಷತೆ ವಹಿಸಿದ್ದು, ರೇಷ್ಮೆ ಸಾಕಾಣಿಕೆಗೆ ನಮ್ಮ ರಾಜ್ಯದ ಹವಾಗುಣವು ಹೆಚ್ಚು ಸೂಕ್ತವಾಗಿದ್ದು, ಸುಧಾರಿತ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ವರ್ಷಪೂರ್ತಿ ರೇಷ್ಮೆ ಹುಳು ಸಾಕಾಣಿಕೆ ಮಾಡಬಹುದಾಗಿದೆ ಎಂದರು.

ಕೋಲಾರ ವಿಭಾಗದ ರೇಷ್ಮೆ ಸಹಾಯಕ ನಿರ್ದೇಶಕ ಎಂ. ಮಂಜುನಾಥ, ದ್ವಿತಳಿ ರೇಷ್ಮೆ ಕೃಷಿಯಲ್ಲಿ ಆಧುನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವ ಮೂಲಕ ರೇಷ್ಮೆ ಬೆಳೆಗಾರರು ರಾಜ್ಯದ ಬೇಡಿಕೆಗೆ ಅನುಗುಣವಾಗಿ ಬೈವೋಲ್ಟಿನ್‌ ರೇಷ್ಮೆಗೂಡು ಉತ್ಪಾದಿಸಬಹುದಾಗಿದೆ ಎಂದರು.

Advertisement

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಎಸ್‌. ಅನಿಲಕುಮಾರ, ಗುಣಮಟ್ಟದ ಹಿಪ್ಪು ನೇರಳೆ ಸೊಪ್ಪು ಉತ್ಪಾದನೆಗೆ ರೇಷ್ಮೆ ಬೆಳೆಗಾರರು ಕಡ್ಡಾಯವಾಗಿ 2 ವರ್ಷಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು. ಹಿಪ್ಪು ನೇರಳೆ ತೋಟಕ್ಕೆ ಸಮಗ್ರ ಪೋಷಕಾಂಶಗಳನ್ನು ನೀಡಿ ಮಣ್ಣಿನ ಫಲವತ್ತತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ರೇಷ್ಮೆ ಕೃಷಿ ವಿಜ್ಞಾನಿ ಡಾ. ಶಶಿಧರ್‌ ಕೆ.ಆರ್‌., ರೇಷ್ಮೆ ಬೆಳೆಗಾರರು ಬೇಸಿಗೆ ಕಾಲದಲ್ಲಿ ಪ್ರಮುಖವಾಗಿ ಕಂಡುಬರುವ ರಸಹೀರುವ ಕೀಟಗಳಾದ ಹಿಟ್ಟು ತಿಗಣೆ, ತ್ರಿಪ್ಸ್‌ ಹಾಗೂ ಮೈಟ್ಸ್‌ ನುಸಿಗಳಿಂದ ಸಂರಕ್ಷಣೆ ಪಡೆಯಲು ಮುಂಜಾಗ್ರತಾ ಕ್ರಮವಾಗಿ ಸಮಗ್ರ ನಿರ್ವಹಣಾ ಕ್ರಮವನ್ನು ಪ್ರತಿ ಕಟಾವಿನಲ್ಲಿ ಅನುಸರಿಸಿ ಸೊಪ್ಪಿನ ಇಳುವರಿ ಹೆಚ್ಚಿಸಬಹುದು ಎಂದರು.

ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಅರುಣಾ ಜಿ.ಆರ್‌. ದಿನದಲ್ಲಿ ಹುಳುಸಾಕು ಮನೆಯಲ್ಲಿ ಸೂಕ್ತ ಉಷ್ಣಾಂಶ ಮತ್ತು ಶೈತ್ಯಾಂಶ ನಿರ್ವಹಣೆ ಮತ್ತಿತರ ಅಂಶಗಳ ಕುರಿತು ತಿಳಿಸಿಕೊಟ್ಟರು. ರೇಷ್ಮೆ ಇಲಾಖೆಯ ಅಧಿಕಾರಿ ವರ್ಗದವರು ಹಾಗೂ 60 ರೇಷ್ಮೆ ಬೆಳೆಗಾರರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next