Advertisement

ಆಫ್ರಿಕಾ ವೈದ್ಯರಿಗೆ ಮಣಿಪಾಲದಲ್ಲಿ ತರಬೇತಿ

10:58 PM Oct 11, 2019 | Sriram |

ಉಡುಪಿ: ಯಾವುದೇ ದೇಶದಲ್ಲಾದರೂ ಬಂಜೆತನ ಮಹಿಳೆಯರಿಗೆ ನೋವುಂಟು ಮಾಡುತ್ತದೆ. ಬಂಜೆತನಕ್ಕೆ ಪುರುಷರು ಮತ್ತು ಮಹಿಳೆಯರಿಬ್ಬರೂ ಕಾರಣರಾಗುತ್ತಾರೆ. ಆದರೆ ಮಹಿಳೆಯರಿಗೇ ಇದರ ನೋವು ಕಾಣಿಸುತ್ತದೆ ಎಂದು ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ|ಎಚ್‌.ಎಸ್‌.ಬಲ್ಲಾಳ್‌ ಹೇಳಿದರು.

Advertisement

ಮಣಿಪಾಲದಲ್ಲಿ ಆಫ್ರಿಕಾದ ವೈದ್ಯರಿಗೆ ಮೂರು ತಿಂಗಳ ಸರ್ಟಿಫಿಕೇಟ್‌ ಕೋರ್ಸ್‌ ಮುಗಿಸಿದವರಿಗೆ ಬುಧವಾರ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಬಹುತೇಕ ಕಡೆ ಮಕ್ಕಳಿಲ್ಲದ ಮಹಿಳೆಯರನ್ನು ತಾರತಮ್ಯದಿಂದ ಕಾಣುತ್ತಾರೆ. ಮಕ್ಕಳಿಲ್ಲದೆ ಅವರು ಒಂಟಿಯಾಗಬೇಕಾಗುತ್ತದೆ. ಇದಕ್ಕಾಗಿ ಮಾಹೆಯು ಮರ್ಕ್‌ ಪ್ರತಿಷ್ಠಾನದ ವತಿಯಿಂದ ಸರ್ಟಿಫಿಕೇಟ್‌ ಕೋರ್ಸ್‌ ನೀಡುತ್ತಿದೆ. ಇದುವರೆಗೆ ಆಫ್ರಿಕಾ, ಬಾಂಗ್ಲಾದೇಶ, ರಶ್ಯಾ, ದಕ್ಷಿಣ ಪೂರ್ವ ಏಶ್ಯನ್‌ ದೇಶಗಳ 55 ವಿಜ್ಞಾನಿಗಳು ಮತ್ತು ವೈದ್ಯರಿಗೆ ಒಂದೂವರೆ ವರ್ಷಗಳಲ್ಲಿ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಮಣಿಪಾಲ ಕೆಎಂಸಿ ಕ್ಲಿನಿಕಲ್‌ ಭ್ರೂಣಶಾಸ್ತ್ರ ವಿಭಾಗವು ಆಫ್ರಿಕ ದೇಶಗಳ ಸ್ತ್ರೀರೋಗ ಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳಿಗೆ ಮಣಿಪಾಲದಲ್ಲಿ ತರಬೇತಿ ಆರಂಭಿಸಿತು. ಈಗ ಹಲವರು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ವಿ.ವಿ. ಸಹಕುಲಪತಿ ಡಾ|ಪೂರ್ಣಿಮಾ ಬಾಳಿಗಾ ಹೇಳಿದರು.

ತರಬೇತಿ ಮತ್ತು ಕೌಶಲವಿರುವ ಆರೋಗ್ಯ ವೃತ್ತಿಪರರ ಕೊರತೆ ನೀಗಿಸಲು ಕೆಎಂಸಿ ಭ್ರೂಣಶಾಸ್ತ್ರಜ್ಞರ ಸಂಖ್ಯೆ ಹೆಚ್ಚಿಸುವ ಗುರಿ ಇರಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಮರ್ಕ್‌ ಪ್ರತಿಷ್ಠಾನ ಈ ಪ್ರಕ್ರಿಯೆಯ ಒಂದು ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೆಎಂಸಿ ಡೀನ್‌ ಡಾ|ಶರತ್‌ ರಾವ್‌ ಹೇಳಿದರು. ಆಫ್ರಿಕ ಮತ್ತು ಏಶ್ಯನ್‌ ದೇಶಗಳಲ್ಲದೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಐವಿಎಫ್ ತರಬೇತಿ ನೀಡಲು ಮಾಹೆ ಮತ್ತು ಮರ್ಕ್‌ ಪ್ರತಿಷ್ಠಾನ ಯೋಜಿಸಿದೆ ಎಂದು ಕಾರ್ಯಕ್ರಮದ ಸಮನ್ವಯಕಾರ ಡಾ|ಸತೀಶ ಅಡಿಗ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next