Advertisement

ಬೆಳಗಾವಿಗೆ ವಿದೇಶ ತರಬೇತಿ: ಕೆಪಿಎಲ್‌ನಲ್ಲೇ ಮೊದಲು

11:28 AM Aug 17, 2017 | Team Udayavani |

ಬೆಂಗಳೂರು: ಕರ್ನಾಟಕ ಪ್ರೀಮಿಯರ್‌ ಲೀಗ್‌ ಟಿ20ಗೆ (ಕೆಪಿಎಲ್‌) ತಯಾರಿ ನಡೆಸುವುದಕ್ಕಾಗಿ ಬೆಳಗಾವಿ ಪ್ಯಾಂಥರ್ ತಂಡ ದುಬೈಗೆ ತಲುಪಿದೆ. ನ್ಯೂಜಿಲೆಂಡ್‌ನ‌ ಖ್ಯಾತ ಮಾಜಿ ಕ್ರಿಕೆಟಿಗ ಜೇಕಬ್‌ ಓರಮ್‌ ಬೆಳಗಾವಿ ತಂಡದ ಆಟಗಾರರಿಗೆ ತರಬೇತಿ ಶುರು ಮಾಡಿದ್ದಾರೆ. ಕೆಪಿಎಲ್‌
ಇತಿಹಾಸದಲ್ಲಿಯೇ ವಿದೇಶದಲ್ಲಿ ತಂಡವೊಂದಕ್ಕೆ ತರಬೇತಿ ನೀಡಿರುವುದು ಇದೇ ಮೊದಲು. ಇದು ರಾಜ್ಯ ಮಟ್ಟದ ಕೂಟವಾಗಿರುವ ಕೆಪಿಎಲ್‌ ವಿಶ್ವದರ್ಜೆಯತ್ತ ಗಮನ ನೆಟ್ಟಿರುವ ಸ್ಪಷ್ಟ ಸಂಕೇತವಾಗಿದೆ.

Advertisement

ಹೌದು, ಕೆಪಿಎಲ್‌ ತಂಡಗಳೆಲ್ಲವೂ ಇದುವರೆಗೆ ಸ್ಥಳೀಯ ಮಟ್ಟದಲ್ಲಿ ತರಬೇತಿ ಪಡೆಯುತ್ತಿದ್ದವು. ಆದರೆ ಈ ಬಾರಿ ಹೊಸತನದ ಪ್ರಯೋಗಕ್ಕೆ ಬೆಳಗಾವಿ ತಂಡದ ಫ್ರಾಂಚೈಸಿ ಮುಂದಾಗಿದೆ. ಇದೇ ಮೊದಲ ಬಾರಿಗೆ ವಿದೇಶದಲ್ಲಿ ತಂಡಕ್ಕೆ ತರಬೇತಿ ನೀಡುತ್ತಿದೆ. ಈ ಕುರಿತಂತೆ ಬೆಳಗಾವಿ ಪ್ಯಾಂಥರ್ ತಂಡದ ಫ್ರಾಂಚೈಸಿ ಅಲಿ ಅಸ್ಫಾಕ್‌ ಥಾರ ಉದಯವಾಣಿ ಜತೆಗೆ ಮಾತನಾಡಿದರು. “ಬೆಳಗಾವಿ ತಂಡ ಹೊಸತನಕ್ಕೆ ತೆರೆದುಕೊಳ್ಳಲು ಬಯಸುತ್ತದೆ. ನಮ್ಮ ತಂಡ ಈ ಕೂಟವನ್ನು ಹಗುರವಾಗಿ ಕಂಡಿಲ್ಲ. ದೊಡ್ಡ ಮಟ್ಟದಲ್ಲಿ ಸಿದ್ಧತೆ ಮಾಡಿಕೊಂಡು ಕಣಕ್ಕೆ ಇಳಿಯಲು ನಾವು
ನಿರ್ಧರಿಸಿದೆವು. ನಾಯಕ ವಿನಯ್‌ ಕುಮಾರ್‌ ಹಾಗೂ ತಂಡದ ಪ್ರಮುಖ ಆಟಗಾರರ ಜತೆಗೆ ಮಾತನಾಡಿ ದುಬೈನಲ್ಲಿ ತರಬೇತಿ ಶುರು ಮಾಡಿಕೊಂಡಿದ್ದೇವೆ. ನ್ಯೂಜಿಲೆಂಡ್‌ ಆಲ್‌ ರೌಂಡರ್‌ ಜೇಕಬ್‌ ಓರಮ್‌ ಅವರ ಗರಡಿಯಲ್ಲಿ ನಮ್ಮ ತಂಡ ಸೂಕ್ತ ತಯಾರಿ ನಡೆಸಿ ತವರಿಗೆ
ವಾಪಸ್‌ ಆಗಲಿದೆ. ಸೆ.1ರಿಂದ ಆರಂಭವಾಗಲಿರುವ ಕೆಪಿಎಲ್‌ನಲ್ಲಿ ಭಾಗವಹಿಸಲಿದೆ ಎಂದರು.

ವೇದಾ ಕೃಷ್ಣಮೂರ್ತಿ ತಂಡದ ರಾಯಭಾರಿ:
ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ರಾಜ್ಯದ ವೇದಾಕೃಷ್ಣ ಮೂರ್ತಿ ಅವರನ್ನು ತಂಡದ ರಾಯಭಾರಿಯಾಗಿ ಬೆಳಗಾವಿ ಪ್ಯಾಂಥರ್ ತಂಡ ಆಯ್ಕೆ ಮಾಡಿಕೊಂಡಿದೆ. ವೇದಾ ಸಾಧನೆ ಎಲ್ಲರಿಗೂ ಸ್ಫೂರ್ತಿ. ಮಹಿಳಾ ಕ್ರಿಕೆಟ್‌ನಲ್ಲಿನ ಅವರ ಸಾಧನೆ ಇತರರಿಗೆ ಪ್ರೇರಣೆಯಾಗಲಿ ಎನ್ನುವ ಸದುದ್ದೇಶದಿಂದ ಅವರಿಗೆ ಗೌರವ ನೀಡಿದ್ದೇವೆ ಎಂದು ಅಲಿ ಅಸ್ಫಾಕ್‌ ಥಾರ ತಿಳಿಸಿದರು. 

ಬೆಳಗಾವಿಗೆ ಲಂಕಾ ಮಾಜಿ ತಾರೆ ಅಟ್ಟಪಟ್ಟು ಉಚಿತ ತರಬೇತಿ
ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮರ್ವನ್‌ ಅಟ್ಟಪಟ್ಟು ಬೆಳಗಾವಿ ಪ್ಯಾಂಥರ್ ತಂಡಕ್ಕೆ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ. ಸೆ.4 ರಂದು ಅವರು ತಂಡವನ್ನು ಕೂಡಿ ಕೊಳ್ಳಲಿದ್ದಾರೆ ಎಂದು ತಂಡದ ಫ್ರಾಂಚೈಸಿ ಅಲಿ ಅಸ್ಫಾಕ್‌ ಥಾರ ತಿಳಿಸಿದರು. ಗಮನಿಸಬೇಕಾದ ಸಂಗತಿಯೆಂದರೆ ಇದಕ್ಕಾಗಿ ಅವರು ಹಣ ಪಡೆಯುತ್ತಿಲ್ಲ. ಉಚಿತವಾಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ! 

ಇ-ಮೇಲ್‌ ಸಂದೇಶದಲ್ಲೇ ಅಟ್ಟಪಟ್ಟು ಒಪ್ಪಿಗೆ: ಬೆಳಗಾವಿ ತಂಡ ವಿದೇಶಿ ಸಲಹೆಗಾರನನ್ನು ತರುವ ಆಸಕ್ತಿಯನ್ನು ಮೊದಲೇ ಹೊಂದಿತ್ತು. ಹೀಗಾಗಿ ಯಾರನ್ನು ಸಂಪರ್ಕಿಸುವುದು ಎನ್ನುವ ವಿಷಯಕ್ಕೆ ಬಂದಾಗ ನೆನಪಾದವರೇ ಲಂಕಾದ ಅಟ್ಟ ಪಟ್ಟು. ಅವರ ಇ-ಮೇಲ್‌ ಖಾತೆಗೆ ಬೆಳ ಗಾವಿ
ತಂಡದ ಮಾಲಿಕ ಅಲಿ ಅಸ್ಫಾಕ್‌ ಥಾರ ಸಂದೇಶ ರವಾನಿಸಿದರು. ಇದಕ್ಕೆ ತಕ್ಷಣವೇ ಲಂಕಾ ಮಾಜಿ ನಾಯಕ ಸ್ಪಂದಿಸಿ ಉಚಿತ ತರಬೇತಿ ನೀಡುವುದಾಗಿ ತಿಳಿಸಿದರು. ಅಟ್ಟಪಟ್ಟು ಪ್ರಯಾಣ ಭತ್ಯೆ, ಊಟ, ವಸತಿ ಖರ್ಚು ನೋಡಿ ಕೊಳ್ಳುತ್ತೇವೆ ಉಳಿದಂತೆ ಅವರು ತಂಡಕ್ಕೆ ಉಚಿತ ಸೇವೆ ನೀಡಲಿದ್ದಾರೆ ಎಂದು ಥಾರ ತಿಳಿಸಿದ್ದಾರೆ.

Advertisement

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next