ಮೂಡುಬಿದಿರೆ: ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ನಡೆಸುತ್ತಿರುವ 16 ದಿನಗಳ ತರಬೇತಿ ಶಿಬಿರಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮನ್ನಣೆ, ಸಹಭಾಗಿತ್ವ ನೀಡುವುದಾಗಿ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಪ್ರಕಟಿಸಿದರು.
ವೀರ ರಾಣಿ ಆಬ್ಬಕ್ಕ ಸಂಸ್ಕೃತಿ ಗ್ರಾಮದ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಂಬಳ ಓಟಗಾರರ 6ನೇ ವರ್ಷದ ತರಬೇತಿ ಶಿಬಿರದಂಗವಾಗಿ ನಡೆದ ಸಭೆಯಲ್ಲಿ “ತುಳುನಾಡ ಸಂಸ್ಕೃತಿ’ ಕುರಿತು ಅವರು ಮಾತನಾಡಿದರು.
“ಕಂಬಳದ ಅಸ್ತಿತ್ವ, ಮಹತ್ವವನ್ನು ಕರಾವಳಿಗೆ ಮಾತ್ರವಲ್ಲ ರಾಜ್ಯಕ್ಕೆ, ದೇಶಕ್ಕೆ, ವಿಶ್ವಕ್ಕೆ ಸಾರುವ ಕಾರ್ಯದಲ್ಲಿ ಸರಕಾರವೂ ಸಹಭಾಗಿ ಎಂಬುದರ ದ್ಯೋತಕವಾಗಿ ಶಿಬಿರಾರ್ಥಿಗಳಿಗೆ ತುಳು ಸಾಹಿತ್ಯ ಅಕಾಡೆಮಿಯ ಅಧಿಕೃತ ಲಾಂಛನ, ಮುದ್ರೆಯೊಂದಿಗೆ ಪ್ರಮಾಣ ಪತ್ರ ನೀಡಲಾಗು ವುದು’ ಎಂದು ಪ್ರಕಟಿಸಿದರು.
ಇದನ್ನೂ ಓದಿ:ಪ್ರವಾಸೋದ್ಯಮ ಎಕ್ಸ್‌ಪೋ: 5,೦೦೦ ಕೋಟಿ ರೂ.ಹೂಡಿಕೆ ನಿರೀಕ್ಷೆ
ಅಧ್ಯಕ್ಷತೆ ವಹಿಸಿದ್ದ ಹೊಟೇಲ್ ಪಂಚರತ್ನ ಇಂಟರ್‌ನ್ಯಾಶನಲ್‌ನ ಆಡಳಿತ ನಿರ್ದೇಶಕ ತಿಮ್ಮಯ್ಯ ಶೆಟ್ಟಿ ಮಾತನಾಡಿ, ಪದವಿ, ಸ್ನಾತಕೋತ್ತರ ಪದವೀಧರರೂ ಕಂಬಳ ಓಟಗಾರರಾಗಲು ಬಂದಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಅಕಾಡೆಮಿ ಸಂಚಾಲಕ ಕೆ. ಗುಣಪಾಲ ಕಡಂಬ ಅವರು ತುಳು ಅಕಾಡೆಮಿಯ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು. ಹಿರಿಯ ರಾದ ರಘುಚಂದ್ರ ಜೈನ್ ಕೆಲ್ಲಪುತ್ತಿಗೆ, ಸುರೇಶ್ ಕೆ. ಪೂಜಾರಿ ರೆಂಜಾಳಕಾರ್ಯ, ಜೋನ್ ಸಿರಿಲ್ ಡಿ’ಸೋಜಾ, ಸಂತೋಷ್ ಪೂಜಾರಿ ಉಪಸ್ಥಿತರಿದ್ದರು.