ಮಾಸ್ಕೋ: 2022ಕ್ಕೆ ಭಾರತದ ಬಹುನಿರೀಕ್ಷಿತ ಮಾನವ ಸಹಿತ ಗಗನಯಾನ ನಡೆಯಲಿದ್ದು, ಮಾಸ್ಕೋದಲ್ಲಿ ಗಗನಯಾತ್ರಿಗಳಿಗೆ ತರಬೇತಿ ನಡೆಯಲಿದೆ. ಇದಕ್ಕಾಗಿ ಭಾರತದ ನಾಲ್ವರು ಗಗನಯಾತ್ರಿಗಳು ನವೆಂಬರ್‌ನಲ್ಲಿ ರಷ್ಯಾಕ್ಕೆ ತೆರಳಲಿದ್ದಾರೆ.
ಅಲ್ಲಿ ಅವರಿಗೆ 15 ತಿಂಗಳು ತರಬೇತಿ ನೀಡಲಾಗುತ್ತಿದೆ. ಯೂರಿ ಗಾಗ್ರಿನ್ ಕಾಸ್ಮೋನಾಟ್ ಟ್ರೈನಿಂಗ್ ಸೆಂಟರ್‌ನಲ್ಲಿ ಈ ತರಬೇತಿ ನಡೆಯಲಿದೆ. ಬಳಿಕ ಭಾರತದಲ್ಲಿ ಸುಮಾರು 8 ತಿಂಗಳು ತರಬೇತಿ ನೀಡಲಾಗುವುದು ಎಂದು ಇಸ್ರೋ ಮೂಲಗಳು ಹೇಳಿವೆ.
ಭಾರತದ ಗಗನಯಾನಕ್ಕೆ ರಷ್ಯಾ ಬೆಂಬಲ ನೀಡುತ್ತಿದ್ದು, ತರಬೇತಿಗೆ ಒಪ್ಪಿಕೊಂಡಿದೆ. ಇದರೊಂದಿಗೆ ಮಾಸ್ಕೋದಲ್ಲಿ ಇಸ್ರೋ ತನ್ನ ಕೇಂದ್ರವೊಂದನ್ನೂ ತೆರೆಯಲಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೊಮೋಸ್ ಗಗನಯಾನಿಗಳ ತರಬೇತಿ ಹೊಣೆಯನ್ನು ಹೊತ್ತುಕೊಂಡಿದೆ.
ಮಾನವ ಸಹಿತ ಗಗನಯಾತ್ರೆಯಲ್ಲಿ ರಷ್ಯಾಕ್ಕೆ ಹೆಚ್ಚು ಅನುಭವವಿದ್ದು, ಈ ಕಾರಣ ಭಾರತ ರಷ್ಯಾದ ನೆರವಿನೊಂದಿಗೆ ಈ ಯೋಜನೆ ಜಾರಿಗೊಳಿಸುತ್ತಿದೆ. ಅಲ್ಲದೇ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ರಷ್ಯಾದೊಂದಿಗೆ ಹೆಚ್ಚು ಕೊಡುಕೊಳ್ಳುವಿಕೆ, ಸ್ನೇಹಾಚಾರವನ್ನು ಹೊಂದಿದೆ. ಉದ್ದೇಶಿತ ಗಗನಯಾನಕ್ಕಾಗಿ ಕಳೆದ ಬಾರಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಭೇಟಿ ನೀಡಿದ್ದಾಗ ಮಾತುಕತೆ ನಡೆಸಿದ್ದಾರೆ. ಇದರೊಂದಿಗೆ ಭಾರತೀಯ ಗಗನಯಾತ್ರಿಗಳ ಬಾಹ್ಯಾಕಾಶ ನೌಕೆಯ ಮಾದರಿ, ಅದರ ತಾಂತ್ರಿಕತೆ, ಸುರಕ್ಷತೆ ಇತ್ಯಾದಿಗಳ ಬಗ್ಗೆ ರಷ್ಯಾದಲ್ಲಿ ಪರಿಶೀಲನೆ ಪರೀಕ್ಷೆಯೂ ನಡೆಯಲಿದೆ. 10 ಸಾವಿರ ಕೋಟಿ ರೂ. ವೆಚ್ಚದ ಈ ಗಗನಯಾತ್ರೆಯ ಯೋಜನೆಯ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ 2018ರ ಸ್ವಾತಂತ್ರ್ಯ ದಿನದಂದು ಮಾಡಿದ್ದರು.