ಬೀದರ: ಸಹಕಾರ ಸಂಘಗಳು ಯಶಸ್ವಿಯಾಗಬೇಕಾದರೆ ಜನರ ವಿಶ್ವಾಸಗಳಿಸಬೇಕು. ಬ್ಯಾಂಕ್‌ಗಳು ತಮ್ಮ ನಿಷ್ಪಕ್ಷಪಾತ ವಿಶ್ವಾಸಾರ್ಹ ಸೇವೆಗಳು ಮತ್ತು ಆಡಳಿತ ವೈಖರಿಯಿಂದಲೇ ಜನರ ವಿಶ್ವಾಸಗಳಿಸಿವೆ ಎಂದು ರಾಜ್ಯ ಸಹಕಾರ ಸಂಘಗಳ ನಿಬಂಧಕ ಎಸ್. ಜಿಯಾವುಲ್ ಹೇಳಿದರು.
ನಗರದ ಸಹರ್ದಾ ಸಂಸ್ಥೆಯಲ್ಲಿ ಬೀದರ ಮತ್ತು ಕಲಬುರ್ಗಿ ಜಿಲ್ಲೆಯ ಪಿಕೆಪಿಎಸ್ ಸಿಇಒಗಳಿಗೆ ನಡೆದ ತರಬೇತಿಯಲ್ಲಿ ಮಾತನಾಡಿದ ಅವರು, ಹಣಕಾಸಿನ ವ್ಯವಹಾರದಲ್ಲಿ ಜನರು ತಮ್ಮಲ್ಲಿರುವ ಹೆಚ್ಚುವರಿ ನಗದನ್ನು ಉಳಿತಾಯ ಮಾಡಲು ಬ್ಯಾಂಕ್‌ನ ಮೇಲೆ ತೋರುವ ವಿಶ್ವಾಸಾರ್ಹತೆಯನ್ನು ಒಬ್ಬ ವ್ಯಕ್ತಿಯ ಮೇಲೆ ತೋರುವುದಿಲ್ಲ. ಇದು ನಂಬಿಕೆಯ ಪ್ರಶ್ನೆಯಾಗಿದೆ. ಬ್ಯಾಂಕ್‌ಗಳು ಮತ್ತು ಸಹಕಾರ ಸಂಘಗಳು ಈ ನಂಬಿಕೆಯನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.
ಸಹಕಾರಿ ರಂಗದಿಂದ ಜನರಿಗೆ ಹಣಕಾಸಿನವ್ಯವಹಾರಕ್ಕೆ ಸಾಕಷ್ಟು ಅನುಕೂಲಗಳಿದ್ದು ಸ್ಥಳೀಯವಾಗಿ ಅಗತ್ಯಕ್ಕೆ ತಕ್ಕಂತೆ ವ್ಯವಹಾರ ನಡೆಸಬಹುದಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಸೇವೆಗಳು ಅಧಿಕಾರಿಗಳ ಮೇಲೆ ಅವಲಂಬಿತವಾಗಿದ್ದರೆ ಸಹಕಾರಿ ಬ್ಯಾಂಕುಗಳ ಸೇವೆ ಸ್ಥಳೀಯ ಆಡಳಿತ ಮಂಡಳಿಯ ಮೇಲೆ ಅವಲಂಬಿತವಾಗಿದೆ. ಇದರಿಂದ ಸ್ಥಳೀಯ ಆವಶ್ಯಕತೆಗಳಿಗೆ ಸ್ಪಂದಿಸಲು ಸಹಕಾರಿ ಬ್ಯಾಂಕ್ ಗಳಿಗೆ ಸಾಧ್ಯವಿದೆ. ಆರ್ಥಿಕ ವ್ಯವಹಾರ ಸಂಸ್ಥೆಗಳು ಚೆನ್ನಾಗಿ ನಡೆಯಬೇಕಿದ್ದರೆ ಸಮಯ ಪಾಲನೆ ಮುಖ್ಯ. ಬ್ಯಾಂಕಿನಂತೆ ಹಣಕಾಸು ವ್ಯವಹಾರ ನಿರ್ವಹಿಸುವಲ್ಲಿ ಸಹಕಾರಿ ಸಂಘಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿವೆ. ಹಣಕಾಸಿನ ನಗದು ವ್ಯವಹಾರ ವ್ಯವಸ್ಥೆಯಲ್ಲಿ ಶಿಸ್ತು ತರುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಗ್ರಾಮೀಣ ಪ್ರದೇಶದ ರೈತರು, ಬಡವರಿಗೆ ಅತ್ಯಂತ ಸುಲಭವಾಗಿ ಹಣಕಾಸಿನ ವ್ಯವಹಾರ ಮಾಡಲು ವ್ಯವಸ್ಥೆ ಹೊಂದಿರುವ ಸಹಕಾರ ಸಂಘಗಳು ಹಳ್ಳಿಗಳ ಜನರೊಂದಿಗೆ ಹೆಚ್ಚಿನ ವಿಶ್ವಾಸದಿಂದ ಕೆಲಸ ನಿರ್ವಹಿಸಬೇಕು. ಇಂದು ಬ್ಯಾಂಕಿಂಗ್ ವ್ಯವಹಾರ ಎಂಬುದು ಅತ್ಯಂತ ಸ್ವರ್ಧಾತ್ಮಕವಾಗಿದ್ದು ಜನರು ತ್ವರಿತ ಸೇವೆಯನ್ನು ಅಪೇಕ್ಷಿಸುತ್ತಿದ್ದಾರೆ ಎಂದು ಹೇಳಿದರು.
ನಿಬಂಧಕರ ಕಚೇರಿಯ ಅಪರ ನಿಬಂಧಕ ನಾರಾಯಣ ಮೂರ್ತಿ, ಬೀದರ ಡಿಸಿಸಿ ಬ್ಯಾಂಕ್ ಸಿಇಒ ಮಹಾಜನ ಮಲ್ಲಿಕಾರ್ಜುನ, ಪ್ರಧಾನವ್ಯಸ್ಥಾಪಕ ವಿಠಲರಡ್ಡಿ ಯಡಮಲ್ಲೆ, ಕಲಬುರ್ಗಿ ಪ್ರಾಂತ್ಯದ ಜಂಟಿ ನಿಬಂಧಕ ಗೋಪಾಲ ಚವ್ಹಾಣ, ಕಲಬುರ್ಗಿ ಡಿಸಿಸಿ ಬ್ಯಾಂಕ್ ಸಿಇಒ ಚಿದಾನಂದ ನಿಂಬಾಲ್ಕರ, ರಾಯಚೂರು ಬ್ಯಾಂಕಿನ ಐಎಸ್ ಗಿರಡ್ಡಿ, ಉಪನಿಬಂಧಕ ಖುದ್ದುಸ್ ಇದ್ದರು. ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಚನಬಸಯ್ನಾ ಸ್ವಾಮಿ ವಂದಿಸಿದರು. ಎಸ್.ಜಿ. ಪಾಟೀಲ, ಅನಿಲ ಕಾರ್ಯಕ್ರಮ ನಿರ್ವಹಿಸಿದರು.