Advertisement

ಮೀನುಗಾರಿಕಾ ಆಸಕ್ತರಿಗೆ “ಟ್ರೈನಿಂಗ್‌ ಸೆಂಟರ್‌’

12:17 AM May 30, 2020 | Sriram |

ವಿಶೇಷ ವರದಿ-ಮಂಗಳೂರು: ಕರಾವಳಿಯಲ್ಲಿ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರವಾಗಿರುವ ಮೀನುಗಾರಿಕೆಯಲ್ಲಿ ಹೊಸ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶದಿಂದ ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಡಿ ಪ್ರತ್ಯೇಕ ಮೀನುಗಾರಿಕಾ ತರಬೇತಿ ಕೇಂದ್ರವೊಂದು ಸ್ಥಾಪನೆಯಾಗಲಿದೆ.

Advertisement

ಕರಾವಳಿಯ ಮೀನುಗಾರಿಕೆ ಇಲ್ಲಿನ ಆರ್ಥ ವ್ಯವಸ್ಥೆಯ ಆಧಾರಸ್ತಂಭ. ಪ್ರತೀ ವರ್ಷ ಸಾವಿರಾರು ಕೋಟಿ ರೂ.ಗಳ ಮೀನುಗಾರಿಕೆ ಉದ್ಯಮವು ಲಕ್ಷಾಂತರ ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ನೀಡಿದೆ. ಇಂತಹ ಕ್ಷೇತ್ರದಲ್ಲಿ ಮತ್ತಷ್ಟು ಉದ್ಯೋಗ ಸೃಷ್ಟಿಲು ನಿರ್ಧರಿಸಲಾಗಿದೆ.

2 ವರ್ಷ ಉಚಿತ ತರಬೇತಿ
ನಗರದ ಹೊಗೆಬಜಾರ್‌ ಮೀನು ಗಾರಿಕಾ ಕಾಲೇಜಿಗೆ ಸೇರಿದ ಭೂಮಿ ಯಲ್ಲಿ ನೂತನ ಸೆಂಟರ್‌ ನಿರ್ಮಾಣ ಗೊಳ್ಳಲಿದೆ. ಕಟ್ಟಡವನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಿರ್ಮಿಸಿ, 2 ವರ್ಷ ಮೀನುಗಾರಿಕೆ ಸಂಬಂಧಿತ ವಿಚಾರಗಳ ತರಬೇತಿಯನ್ನು ಮೀನುಗಾರಿಕಾ ಕಾಲೇಜಿನ ವತಿಯಿಂದ ಉಚಿತವಾಗಿ ನೀಡಲಾಗುತ್ತದೆ. ವಸತಿ ಹಾಗೂ ಊಟದ ವ್ಯವಸ್ಥೆಯೂ ದೊರೆಯಲಿದೆ. 2 ವರ್ಷ ಈ ತರಬೇತಿ ದೊರೆಯಲಿದೆ. ಒಬ್ಬ ಫಲಾನುಭವಿಗೆ 2 ವರ್ಷ ತರಬೇತಿಗೆ ಬೇಕಾಗುವ ಹಣವನ್ನು ಸ್ಮಾರ್ಟ್‌ಸಿಟಿ ಸಂಸ್ಥೆಯೇ ನೀಡಲಿದೆ. ಪ್ರತೀವರ್ಷ 180 ಸದಸ್ಯರಂತೆ ಎರಡು ವರ್ಷ 360 ಸದಸ್ಯರು ತರಬೇತಿ ಪಡೆಯಲು ಅವಕಾಶವಿರಲಿದೆ.

4.75 ಕೋಟಿ ರೂ. ವೆಚ್ಚ
ಒಟ್ಟು 4.75 ಕೋ.ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, 2.40 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಶುಕ್ರವಾರದಿಂದ ಕಟ್ಟಡದ ಕಾಮಗಾರಿ ಆರಂಭವಾಗಿದ್ದು, ವರ್ಷ ದೊಳಗೆ ಕಾಮಗಾರಿ ಪೂರ್ಣ ಗೊಳ್ಳುವ ನಿರೀಕ್ಷೆಯಿದೆ. ಉಳಿದಂತೆ 2.35 ಕೋ. ರೂ.ಗಳನ್ನು ತರಬೇತಿಗೆ ನಿಗದಿ ಮಾಡಲಾಗಿದೆ. ಮೀನುಗಾರರು, ನಿರುದ್ಯೋಗಿಗಳು, ಶಾಲೆ ಬಿಟ್ಟ ಯುವಕರಿಗೆ ತರಬೇತಿ ಸಿಗಲಿದೆ. ಬಂದರು, ಮೀನುಗಾರಿಕೆ ಕುರಿತಾದ ಕೆಲಸದ ಬಗ್ಗೆ ತರಬೇತಿ ನೀಡಲಾಗುತ್ತದೆ.

ಏನಿದು ತರಬೇತಿ?
ಮೀನುಗಾರಿಕೆಯ ಬಗ್ಗೆ ಆಸಕ್ತಿ ಇರುವವರಿಗೆ ಈ ತರಬೇತಿ ಉಪಯೋಗವಾಗಲಿದೆ. ಮೀನುಗಾರಿಕಾ ಬಲೆಗಳಲ್ಲಿ ಬಳಕೆಯಾಗುವ ನೆಟ್ಟಿಂಗ್‌, ಫಿಶ್‌ ಕಟ್ಟಿಂಗ್‌, ಬೋಟ್‌ ರಿಪೇರಿ, ಆಲಂಕಾರಿಕ ಮೀನು ಸೇರಿದಂತೆ ಸುಮಾರು 12 ವಿವಿಧ ತರಬೇತಿ ಇಲ್ಲಿ ದೊರೆಯಲಿದೆ. ಎಲ್ಲ ಫಲಾನುಭವಿಗಳಿಗೆ ಸ್ಮಾರ್ಟ್‌ಸಿಟಿ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತದೆ. ಮೀನುಗಾರಿಕಾ ಕಾಲೇಜಿನ ತಜ್ಞರು ತರಬೇತಿ ನೀಡಲಿದ್ದಾರೆ.

Advertisement

 ಕೇಂದ್ರ ನಿರ್ಮಾಣ ಆರಂಭ
ಕರಾವಳಿಯ ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸಬರಿಗೂ ಅವಕಾಶ ದೊರೆಯಬೇಕು ಎಂಬ ನೆಲೆಯಲ್ಲಿ ಮೀನುಗಾರಿಕೆ ಸಂಬಂಧಿತ ವಿಚಾರಗಳಲ್ಲಿ ಯುವಕರಿಗೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಉಚಿತ ತರಬೇತಿ ನೀಡುವ ಯೋಜನೆ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ನಗರದ ಹೊಗೆಬಜಾರ್‌ನಲ್ಲಿ “ಸ್ಕಿಲ್‌ ಡೆವೆಲಪ್‌ಮೆಂಟ್‌ ಆ್ಯಂಡ್‌ ಸೇಫ್ಟಿ ಟ್ರೈನಿಂಗ್‌ ಸೆಂಟರ್‌’ನ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದೆ.
– ಮೊಹಮ್ಮದ್‌ ನಝೀರ್‌
ವ್ಯವಸ್ಥಾಪಕ ನಿರ್ದೇಶಕ,
ಸ್ಮಾರ್ಟ್‌ಸಿಟಿ ಕಂಪೆನಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next