ಹೊಸದಿಲ್ಲಿ : ಈಜು ಕೊಳಕ್ಕೆ ಬಿದ್ದ ತನ್ನ ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಹೋದ ಭಾರತೀಯ ವಿದೇಶ ಸೇವೆಗಳ (ಐಎಫ್ಎಸ್) ತರಬೇತಿ ನಿರತ ಅಧಿಕಾರಿಯೋರ್ವರು ತಾನೇ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಿನ್ನೆ ಸೋಮವಾರ ರಾತ್ರಿ ಇಲ್ಲಿ ನಡೆದಿದೆ.
ದಕ್ಷಿಣ ದಿಲ್ಲಿಯ ಬೇರ್ ಸರಾಯ್ ಪ್ರದೇಶದಲ್ಲಿರುವ ಫಾರೀನ್ ಸರ್ವಿಸ್ ಇನ್‌ಸ್ಟಿಟ್ಯೂಟ್‌ನ ಈಜು ಕೊಳದಲ್ಲಿ 30ರ ಹರೆಯದ ಆಶಿಶ್ ದಹಿಯಾ ಅವರ ಮೃತ ದೇಹ ತೇಲುತ್ತಿದ್ದುದನ್ನು ಪೊಲೀಸರು ನಿನ್ನೆ ರಾತ್ರಿ ಕಂಡರು.
ಮೃತ ದಹಿಯಾ ಅವರು ಮೂಲತಃ ಹರಿಯಾಣದ ಸೋನಿಪತ್‌ನವರು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್‌ಸ್ಟಿಟ್ಯೂಟ್‌ನ ಈಜು ಕೊಳದಲ್ಲಿ ವ್ಯಕ್ತಿಯೊಬ್ಬ ಮುಳುಗುತ್ತಿದ್ದಾನೆ ಎಂದು ಕೆಲವರು ಪೊಲೀಸರಿಗೆ ತಿಳಿಸಿದ್ದರು. ನೀರಲ್ಲಿ ಮುಳುಗಿದ ವ್ಯಕ್ತಿಯನ್ನು ಒಡನೆಯೇ ಪೋರ್ಟಿಸ್ ಆಸ್ಪತ್ರೆಗೆ ಒಯ್ದಾಗ ಅಲ್ಲಿನ ವೈದ್ಯರು ಆತ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಪೊಲೀಸು ತಿಳಿಸಿದ್ದಾರೆ.
ಮೃತ ದಹಿಯಾ ಅವರು ಈಜು ಕೊಳ ಸಮೀಪ, ಇಂಡಿಯನ್ ಫಾರೀನ್ ಮತ್ತು ರೆವೆನ್ಯೂ ಸರ್ವಿಸಸ್‌ನ ತನ್ನ ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಪಾರ್ಟಿ ನಡೆಯುತ್ತಿದ್ದ ವೇಳೆ “ಮೋಜಿಗಾಗಿ ಈಜೋಣ’ ಎಂದು ದಹಿಯಾ ಮತ್ತು ಅವರ ಸ್ನೇಹಿತರು ನಿರ್ಧರಿಸಿ ಅಂತೆಯೇ ಈಜುಕೊಳಕ್ಕೆ ಇಳಿದರು. ಬಹುಷಃ ಅದಕ್ಕೆ ಮುನ್ನ ದಹಿಯಾ ಮದ್ಯಪಾನ ಮಾಡಿದ್ದಿರಬೇಕು ಎಂದು ಪೊಲೀಸರು ಹೇಳಿದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ ಪಾರ್ಟಿಯ ವೇಳೆ ಮಹಿಳಾ ಅಧಿಕಾರಿಯೋರ್ವರು ಆಕಸ್ಮಿಕವಾಗಿ ಈಜುಕೊಳಕ್ಕೆ ಬಿದ್ದರು; ಅವರನ್ನು ರಕ್ಷಿಸಲು ದಹಿಯಾ ಮುಂದಾದರು. ಮಹಿಳಾ ಅಧಿಕಾರಿಯನ್ನು ಮೇಲಿದ್ದವರು ಹೇಗೋ ಮೇಲಕ್ಕೆತ್ತಿದರು; ಆದರೆ ದಹಿಯಾ ಮುಳುಗಿ ಮೃತಪಟ್ಟರು.