ಹೊಸದಿಲ್ಲಿ: ಕೋಲ್ಕತಾದ ಟ್ರೈನಿ ವೈದ್ಯೆ ಶವಪರೀಕ್ಷೆಗೆ ಅಗತ್ಯವಾದ ದಾಖಲೆ ನಾಪತ್ತೆ ಕುರಿತು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ನ್ಯಾಯ ಪೀಠ ಸೂಚಿಸಿದೆ. ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಜೆಐ ಡಿ.ವೈ.ಚಂದ್ರಚೂಡ ನೇತೃತ್ವದ ಪೀಠವು, ಮೃತದೇಹ ವನ್ನು ಶವಪರೀಕ್ಷೆಗೆ ನೀಡುವಾಗ ಅಗತ್ಯವಿರುವ ಚಲನ್‌ನ ಉಲ್ಲೇಖ ಎಲ್ಲಿದೆ ಎಂದು ಪೀಠ ಪ್ರಶ್ನಿಸಿತು. ಆಗ ಪಶ್ಚಿಮ ಬಂಗಾಲ ಸರಕಾರ ಪರ ವಕೀಲ ಕಪಿಲ್ ಸಿಬಲ್, ಸದ್ಯಕ್ಕೆ ಚಲನ್ ಸಿಗುತ್ತಿಲ್ಲ. ಈ ಕುರಿತು ಶೀಘ್ರವೇ ಕೋರ್ಟ್‌ಗೆ ಮಾಹಿತಿ ನೀಡಲಾ ಗುವುದು ಎಂದು ಹೇಳಿದರು. ಸೆ.17ರೊಳಗೆ ಹೊಸ ವರದಿ ಸಲ್ಲಿಸಲು ಸಿಬಿಐಗೆ ಸೂಚಿಸಿತು.
ಕರ್ತವ್ಯಕ್ಕೆ ಹಾಜರಾಗಲು ವೈದ್ಯರಿಗೆ ಸೂಚನೆ
ಸೋಮವಾರದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಪ್ರತಿಭಟನಾನಿರತ ವೈದ್ಯರು ಮಂಗಳವಾರ ಸಂಜೆ 5 ಗಂಟೆಯೊಳಗೆ ಕರ್ತವ್ಯಕ್ಕೆ ಮರಳಬೇಕು ಎಂದು ಸೂಚಿಸಿತು. ವರ್ಗಾವಣೆ ಸೇರಿದಂತೆ ಇನ್ನಿತರ ಕಠಿನ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಪಶ್ಚಿಮ ಬಂಗಾಲ ಸರಕಾರ ಭರವಸೆ ನೀಡಿದ ಬಳಿಕ, ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿತು.