ದಾವಣಗೆರೆ: ನವದೆಹಲಿಯ ನಿಜಾಮುದೀನ್ ರೈಲ್ವೆ ನಿಲ್ದಾಣ ಸಮೀಪ ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದಿಲ್ಲಿ ಪೊಲೀಸ್ ಇಲಾಖೆಯ ತರಬೇತಿ ಪಿಎಸ್‌ಐ ಕೆ.ಎಸ್. ತಿಪ್ಪೇಸ್ವಾಮಿ ಪ್ರತಿ ನಿತ್ಯ ತಮ್ಮ ಪೋಷಕರೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರೂ ಯಾವುದೇ ಸಂದರ್ಭದಲ್ಲೂ ವೈಯಕ್ತಿಕ, ಇಲಾಖೆಯಲ್ಲಿನ ಸಮಸ್ಯೆಯ ಬಗ್ಗೆ ಮಾತನಾಡಿರಲೇ ಇಲ್ಲ.
ಚನ್ನಗಿರಿ ತಾಲೂಕಿನ ಕಂಚಿಗನಾಳ್ ಗ್ರಾಮದ ಷಣ್ಮುಖಪ್ಪ, ಕೌಶಲ್ಯಮ್ಮ ದಂಪತಿಗೆ ಏಕೈಕ ಪುತ್ರ ತಿಪ್ಪೇಸ್ವಾಮಿ. ಇಬ್ಬರು ಅಕ್ಕಂದಿರಿಗೆ ಮದುವೆಯಾಗಿದ್ದು, ತಿಪ್ಪೇಸ್ವಾಮಿ ಅವಿವಾಹಿತರಾಗಿದ್ದರು. ವಿದ್ಯುತ್ ಗುತ್ತಿಗೆದಾರರಾಗಿರುವ ಷಣ್ಮುಖಪ್ಪ ಉತ್ತಮ ಸ್ಥಿತಿಯಲ್ಲಿದ್ದರೂ ಸರ್ಕಾರಿ ನೌಕರನಾಗಬೇಕು ಎಂಬ ಮಗನ ಆಸೆಗೆ ಎಲ್ಲಾ ರೀತಿಯ ನೆರವು ನೀಡಿದ್ದರು.
ಪ್ರತಿ ದಿನ ತಂದೆ, ತಾಯಿಯೊಂದಿಗೆ ಮಾತನಾಡುತ್ತಿದ್ದ ತಿಪ್ಪೇಸ್ವಾಮಿ ಹೊಲ, ಮನೆ ಮತ್ತಿತರ ಸಂಗತಿಗಳ ಬಗ್ಗೆ ವಿಚಾರಿಸುತ್ತಿದ್ದಂತೆ. ಎಂದಿಗೂ ಇಲಾಖೆಯಲ್ಲಿ ತನ್ನ ಸಮಸ್ಯೆಯ ಬಗ್ಗೆ ಸುಳಿವನ್ನೂ ನೀಡಿರಲಿಲ್ಲ. ಹಾಗಾಗಿ ಅವರು ಈ ರೀತಿ ಆತ್ಮಹತ್ಯೆಗೆ ಒಳಗಾದ ವಿಷಯ ತಿಳಿದಾಗ ಪೋಷಕರು ಮಾತ್ರವಲ್ಲ ಗ್ರಾಮಸ್ಥರೂ ನಂಬುವ ಸ್ಥಿತಿಯಲ್ಲಿ ಇರಲಿಲ್ಲ.
ಭಾರೀ ಧೈರ್ಯವಂತ ಮತ್ತು ಒಳ್ಳೆಯ ಗುಣದ ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಒಳಗಾಗಿದ್ದಾರೆ ಎಂಬುದರ ಬಗ್ಗೆ ಗ್ರಾಮಸ್ಥರು, ಸಂಬಂಧಿಕರು ಸಂಶಯದಿಂದ ನೋಡುವಂಥಾಗಿದೆ. ಶಿವಮೊಗ್ಗದ ಜೆಎನ್‌ಇಸಿಯಲ್ಲಿ ಇಂಜಿನಿಯರಿಂಗ್, ಎಂಬಿಎ ಪದವಿ ನಂತರ ಯುಪಿಎಸ್‌ಸಿಯ ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದ ತಿಪ್ಪೇಸ್ವಾಮಿ, ಅದರಲ್ಲಿ ಯಶಸ್ವಿಯಾಗದಿದ್ದರಿಂದ ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಆಗಿ ನೇಮಕಗೊಂಡಿದ್ದರು.
ಅಕ್ಟೋಬರ್‌ನಲ್ಲಿ ತರಬೇತಿಗೆ ತೆರಳಿದ್ದ ಅವರು ಮರಳಿ ಬಂದಿದ್ದು ಶವವಾಗಿ. ಮಂಗಳವಾರ ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಒಳಗಾಗಿರುವ ವಿಷಯ ಗೊತ್ತಾಗುತ್ತಿದ್ದಂತೆ ದೆಹಲಿಗೆ ತೆರಳಿದ ಪೋಷಕರು, ಸಂಬಂಧಿಕರು ಬುಧವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಶವದೊಂದಿಗೆ ಆಗಮಿಸಿದಾಗ ಇಡೀ ಕಂಚಿಗನಾಳ್ ಗ್ರಾಮವೇ ದುಖಃದ ಮಡುವಿನಲ್ಲಿ ಮುಳುಗಿತ್ತು.
ಕಣ್ಣೆದುರಿಗೆ ಪಾರ್ಥಿವ ಶರೀರವಿದ್ದರೂ ತಮ್ಮೂರ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಯಾರೂ ಒಪ್ಪಲಿಕ್ಕೆ ಸಾಧ್ಯವಿರಲಿಲ್ಲ. ಭಾರೀ ದುಖಃ ತಪ್ತ ಜನಸಾಗರದ ನಡುವೆ ತಿಪ್ಪೇಸ್ವಾಮಿ ಅಂತ್ಯಸಂಸ್ಕಾರ ನೆರವೇರಿತು. ಕರ್ನಾಟಕ ಪೊಲೀಸ್ ಇಲಾಖೆ ಪರವಾಗಿ ಚನ್ನಗಿರಿ ಪಿಎಸ್‌ಐ ವೀರಬಸಪ್ಪ ಗೌರವ ಸಲ್ಲಿಸಿದರು.