Advertisement

ತಿರುಪತಿ- ಚೆನ್ನೈಎಕ್ಸ್ ಪ್ರೆಸ್‌ ರೈಲಿಗೆ ಚಾಲನೆ

02:35 PM Apr 18, 2022 | Niyatha Bhat |

ಶಿವಮೊಗ್ಗ: ಶಿವಮೊಗ್ಗದಿದ ವಾರಕ್ಕೆ ಎರಡು ದಿನ ತಿರುಪತಿ ಮತ್ತು ಚೆನ್ನೈಗೆ ಹೋಗುವ ವಿಶೇಷ ಹೊಸ ಎಕ್ಸ್‌ಪ್ರೆಸ್‌ ರೈಲಿಗೆ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ, ಎಂಎಲ್‌ಸಿ ಆಯನೂರು ಮಂಜುನಾಥ್‌, ಎಸ್‌. ರುದ್ರೇಗೌಡ, ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಕೋವಿಡ್‌ ಸಂದರ್ಭದಲ್ಲಿ ಅನೇಕ ರೈಲುಗಳು ರದ್ದಾಗಿದ್ದನ್ನು ನಾವು ನೋಡಿದ್ದೇವೆ. ಹಿಂದೆ ಚೆನ್ನೈಗೆ ಹೋಗಬೇಕೆಂದರೆ ಬೆಂಗಳೂರಿನಿಂದ ರೈಲು ಹತ್ತಬೇಕಿತ್ತು. ಯೋಚನೆ ಮಾಡಿ ತಿರುಪತಿ ಹಾಗೂ ಚೆನ್ನೈಗೆ ಒಂದೇ ರೈಲು ಬಿಡಲಾಗಿದೆ. ಒಂದು ರೈಲು ಮಾರ್ಗಕ್ಕೆ ನೂರಾರು ರೈಲು ಮಾರ್ಗಗಳ ಕ್ಲಿಯರೆನ್ಸ್‌ ಕೊಡಬೇಕಾಗುತ್ತದೆ. ಸಲಹೆ ನೀಡಿ ಹೊಸ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಇದಕ್ಕೆ ಸಹಕಾರ ನೀಡಿದ ಕೇಂದ್ರ ಸರಕಾರಕ್ಕೆ ಧ್ಯನವಾದ ಹೇಳಲೇಬೇಕು ಎಂದರು.

ದೇಶದ ಅಭಿವೃದ್ಧಿಗೆ ಸಾರಿಗೆ ಸಂಪರ್ಕ ಅಗತ್ಯವಾಗಿರುತ್ತದೆ. ಅದರ ಭಾಗವಾಗಿಯೇ ರೈಲು ಸೇವೆಯನ್ನು ಆರಂಭಿಸಲಾಗಿದೆ. ಈ ರೈಲು ವಾರದಲ್ಲಿ ಎರಡು ದಿನ ಸಂಚರಿಸಲಿದೆ. ರೈಲ್ವೆ ಕೋಚಿಂಗ್‌ ಡಿಪೋ ಕಾಮಗಾರಿ ನಡೆಯುತ್ತಿದೆ. ನಂತರ ಸರ್ವಿಸ್‌ಗಾಗಿ ಅನೇಕ ರೈಲುಗಳು ಇಲ್ಲಿಗೆ ಬರಲಿವೆ. ಪೂರ್ಣಗೊಂಡ ಬಳಿಕ ಕಿಸಾನ್‌ ರೈಲು ಸೇವೆಯನ್ನು ತಂದರೆ ನಮ್ಮ ರೈತರು ಉತ್ಪನ್ನಗಳನ್ನು ದೇಶದ ನಾನಾ ಭಾಗಗಳಿಗೆ ಕಳುಹಿಸಿಕೊಡಬಹುದಾಗಿದೆ. 4 ರೈಲ್ವೆ ಓವರ್‌ ಬ್ರಿಡ್ಜ್, 2 ಅಂಡರ್‌ ಬ್ರಿಡ್ಜ್ ಕಾಮಗಾರಿಗಳು ನಡೆಯುತ್ತಿವೆ. ನಿತ್ಯ 9ರಿಂದ 10 ಸಾವಿರ ಜನ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಹೊಸ ರೈಲಿನಿಂದ ಶಿವಮೊಗ್ಗದಿಂದ ಬಳ್ಳಾರಿವರೆಗೆ ಸಂಪರ್ಕ ಸಿಗಲಿದೆ. ಡಿಸೆಂಬರ್‌ ಒಳಗೆ ವಿಮಾನ ನಿಲ್ದಾಣ ಕಾಮಗಾರಿ ಕೂಡ ಪೂರ್ಣಗೊಳ್ಳಲಿದೆ ಎಂದರು.

ಬೈಂದೂರಲ್ಲಿ 400-450 ಕೋಟಿ ರೂ. ವೆಚ್ಚದಲ್ಲಿ ಬಂದರು ನಿರ್ಮಾಣಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ದೇಶದಲ್ಲಿ ಒಟ್ಟು 15 ಕೇಬಲ್‌ ಕಾರ್‌ಗಳಿದ್ದು ಕೊಡಚಾದ್ರಿ- ಕೊಲ್ಲೂರಿಗೆ 1100 ಕೋಟಿ ರೂ. ವೆಚ್ಚದಲ್ಲಿ ಕೇಬಲ್‌ ಕಾರ್‌ ಯೋಜನೆ ಜಾರಿಯಾಗಲಿದೆ ಎಂದರು.

Advertisement

ಎಂಎಲ್‌ಸಿ ಆಯನೂರು ಮಂಜುನಾಥ ಮಾತನಾಡಿ, ಶಿವಮೊಗ್ಗದಿಂದ ಸಾಕಷ್ಟು ರೈಲುಗಳು ಓಡಾಟ ಆರಂಭಗೊಂಡಿದೆ. ಚೆನ್ನೈನ ಸಾಕಷ್ಟು ಜನ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ಭಕ್ತಾದಿಗಳಿಗೆ ಹೊಸ ರೈಲು ಅನುಕೂಲವಾಗಿದೆ. ಚೆನ್ನೈಗೆ ಹೋಗಲು ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ ಎಂದರು.

ರೈಲುಗಳ ಬದಲಾವಣೆ ಮಾಡದೆ ನೇರವಾಗಿ ತಿರುಪತಿಗೆ ತಲುಪುವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಶಿವಮೊಗ್ಗದಲ್ಲಿ ಈ ಹಿಂದೆಯೂ ರೈಲು ಬಿಟ್ಟಿದ್ದೆವು. ಅವು ಆರಂಭವಾಗಿಲ್ಲ. ನಾವು ಗಾಲಿಯಲ್ಲಿ ಬಿಟ್ಟಿದ್ದೆವು. ರೈಲ್ವೆ ಸಚಿವರಾಗಿದ್ದರೂ ಇಷ್ಟೊಂದು ರೈಲುಗಳನ್ನು ತರಲು ಸಾಧ್ಯವಾಗುತ್ತಿರಲಿಲ್ಲ. ಕಾಮಗಾರಿಗಳ ವಿಚಾರದಲ್ಲಿ ಪರಿಣಿತರಾಗಿದ್ದಾರೆ. ಬರುವ ದಿನಗಳಲ್ಲಿ ಶಿವಮೊಗ್ಗ ಬೆಳೆಯಲಿದೆ ಎಂದರು.

ಎನ್‌ಎಚ್‌, ರೈಲ್ವೆ, ವಿಮಾನಯಾನ ಇದ್ದರೆ ಉದ್ಯಮ ಬೆಳೆಯಲು ಸಾಧ್ಯ. ಬಂಡವಾಳದಾರರ ಗಮನವನ್ನು ಶಿವಮೊಗ್ಗ ಬರುವ ದಿನಗಳಲ್ಲಿ ಸೆಳೆಯಲಿದೆ. ಬರುವ ವರ್ಷಗಳಲ್ಲಿ ರಾಘವೇಂದ್ರ ಅವರು ರೈಲ್ವೆ ಮಂತ್ರಿ ಆಗುವ ಅರ್ಹತೆ ಹೊಂದಿದ್ದಾರೆ. ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಅವರನ್ನು ಗುರುತಿಸಲಿದೆ ಎಂದು ಆಯನೂರು ಮಂಜುನಾಥ್‌ ವಿಶ್ವಾಸ ವ್ಯಕ್ತಪಡಿಸಿದರು.

ಎಂಎಲ್‌ಸಿ ಎಸ್‌. ರುದ್ರೇಗೌಡ ಮಾತನಾಡಿ, ರಾಜ್ಯದಲ್ಲಿ ಹಲವು ಯೋಜನೆಗಳಿಗೆ ಅನುಮೋದನೆಯನ್ನು ಕೇಂದ್ರ ಸರಕಾರ ನೀಡಿದೆ. ಗುಜರಾತ್‌ನಲ್ಲಿ ನರೇಂದ್ರ ಮೋದಿ ಅವರು ಸಿಎಂ ಆಗಿದ್ದಾಗ ಕರ್ನಾಟಕದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದರು. ಅವರು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಮಾಡಿದ್ದಾರೆ. 4 ಮೇಲ್ಸೇತುವೆ, ರಿಂಗ್‌ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದು ರಾಘವೇಂದ್ರ ಅವರ ಆಸಕ್ತಿಯ ಫಲವಾಗಿದೆ ಎಂದರು.

ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್‌, ಸೂಡಾ ಅಧ್ಯಕ್ಷ ಎನ್‌.ಜೆ.ನಾಗರಾಜ್, ಜಿಪಂ ಸಿಇಒ ವೈಶಾಲಿ, ಡಿಸಿ ಡಾ| ಆರ್‌.ಸೆಲ್ವಮಣಿ, ಪ್ರಮುಖರಾದ ಎಸ್‌.ಎಸ್‌. ಜ್ಯೋತಿಪ್ರಕಾಶ್‌, ದಿವಾಕರ್‌ ಶೆಟ್ಟಿ, ಮಾಲತೇಶ್‌, ರಾಜೇಶ್‌ ಕಾಮತ್‌, ಎಸ್.ದತ್ತಾತ್ರಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಚನ್ನವೀರಪ್ಪ, ಜಗದೀಶ್‌, ಶ್ರೀಧರ್‌ಮೂರ್ತಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next