Advertisement
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಳಗಾವಿಯಿಂದ ಪುಣೆಗೆ ಪುಶ್‌ಪುಲ್ ರೈಲು, ಮೈಸೂರು-ಧಾರವಾಡ ರೈಲು ಸಂಚಾರವನ್ನು ಮೀರಜ ಇಲ್ಲವೇ ಕೊಲ್ಲಾಪುರದವರೆಗೆ ವಿಸ್ತರಣೆ ಮಾಡುವುದು ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಸಹಾಯವಾಗುವ ಹಲವಾರು ಯೋಜನೆಗಳನ್ನು ಕೈಗೊಳ್ಳುವ ಚಿಂತನೆ ನಡೆದಿದೆ ಎಂದು ಹೇಳಿದರು. ಬೆಳಗಾವಿಯಿಂದ ವಾಸ್ಕೋಗೆ ನೇರ ರೈಲು ಸಂಚಾರ ಶೀಘ್ರದಲ್ಲೇ ಆರಂಭಿಸಲಾಗುತ್ತದೆ ಎಂದರು.
Related Articles
Advertisement
ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ ಮಾತನಾಡಿ, ಸ್ವಾತಂತ್ರ್ಯ ಸಿಕ್ಕ ನಂತರ ಕರ್ನಾಟಕದಿಂದ ಎಂಟು ಜನ ಕೇಂದ್ರ ಸಚಿವ ಸಂಪುಟದಲ್ಲಿ ಹಾಗೂ ರಾಜ್ಯ ಖಾತೆಯಲ್ಲಿ ನಾಲ್ಕು ಜನ ರೈಲ್ವೆ ಮಂತ್ರಿಗಳಾಗಿದ್ದರು. ಆದರೆ ರೈಲ್ವೆ ವಿಷಯದಲ್ಲಿ ಬೆಳಗಾವಿಗೆ ನ್ಯಾಯ ಸಿಕ್ಕಿರಲಿಲ್ಲ. ಈಗ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಬಂದ ನಂತರ ಸಾಕಷ್ಟು ರೈಲ್ವೆ ಯೋಜನೆಗಳು ವೇಗ ಪಡೆದಿವೆ ಎಂದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ನರೇಂದ್ರ ಮೋದಿ ಅವರ ಇಚ್ಛಾಶಕ್ತಿಯಿಂದ ದೇಶದಲ್ಲಿ ಬುಲೆಟ್ ಟ್ರೆನ್ ಸಹ ಬರಲಿದೆ ಎಂದು ಕೋರೆ ಹೇಳಿದರು.
ಈಗ ಕೇಂದ್ರದಲ್ಲಿ ಸುರೇಶ ಅಂಗಡಿ ರೈಲ್ವೆ ಸಚಿವರಾಗಿರುವದು ನಮಗೆ ಬಹಳ ಸಂತಸದ ವಿಷಯ. ಅವರ ಅವಧಿಯಲ್ಲಿ ಈ ಭಾಗಕ್ಕೆ ಹೆಚ್ಚಿನ ರೈಲು ಸೇವೆ ದೊರೆಯಬೇಕು. ರೈಲ್ವೆ ನಿಲ್ದಾಣಗಳ ಅಧುನೀಕರಣ ಕಡೆ ಹೆಚ್ಚು ಗಮನನೀಡಬೇಕು. ಮುಂಬೈ, ದೆಹಲಿ ಮೊದಲಾದ ಭಾಗಗಳಿಗೆ ಇಲ್ಲಿಂದ ರೈಲು ಸಂಚಾರ ಆರಂಭವಾಗಬೇಕು ಎಂದರು.
ಶಾಸಕಿ ಲಕ್ಷ್ಮಿ ಹೆಬ್ಟಾಳಕರ ಮಾತನಾಡಿ, ಬೆಳಗಾವಿಯಿಂದ ನೂತನವಾಗಿ ಆರಂಭವಾಗಿರುವ ವಿಶೇಷ ರೈಲು ಈ ಭಾಗದ ಜನರ ಬಹು ದಿನಗಳ ಬೇಡಿಕೆ ಈಡೇರಿಸಿದೆ. ಇದರ ಹಿಂದೆ ಎಲ್ಲರ ಪ್ರಯತ್ನ ಇದೆ. ಈ ಭಾಗಕ್ಕೆ ಸಾಕಷ್ಟು ಅನುಕೂಲ ಕಲ್ಪಿಸಿಕೊಡುವ ರೈಲಿಗೆ ಬೆಳವಡಿ ಮಲ್ಲಮ್ಮನ ಹೆಸರಿಡಬೇಕು ಎಂದು ಅವರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದರು.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿ ಜನರ ಬಹಳ ದಿನಗಳ ಕನಸು ನನಸಾಗಿದೆ. ಬೆಳಗಾವಿಗೆ ಸ್ವಾತಂತ್ರ್ಯ ಸಿಕ್ಕು ಹಳೆಯ ಕಾಲವಾಗಿದೆ. ಆದರೆ ಬೆಳಗಾವಿಯಿಂದ ಬೆಂಗಳೂರಿಗೆ ರೈಲು ಸಿಗಲು ಸಚಿವರಾಗಿ ಸುರೇಶ ಅಂಗಡಿ ಅವರೇ ಬರಬೇಕಾಯಿತು ಎಂದರು. ಶಾಸಕರಾದ ಶಾಸಕ ಅನಿಲ ಬೆನಕೆ, ದುರ್ಯೋಧನ ಐಹೊಳೆ, ಆನಂದ ಮಾಮನಿ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಡಿಸಿ ಡಾ| ಎಸ್.ಬಿ. ಬೊಮ್ಮನಹಳ್ಳಿ, ಡಿಸಿಪಿ ಯಶೋಧಾ ಒಂಟಗೂಡಿ ಉಪಸ್ಥಿತರಿದ್ದರು. ನಂತರ ರಾತ್ರಿ 9 ಗಂಟೆಗೆ ನವವಧುವಿನಂತೆ ಶೃಂಗಾರಗೊಂಡಿದ್ದ ನೂತನ ರೈಲು ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿತು.