ನವದೆಹಲಿ: ಅಗ್ಗದ ರಸ್ತೆ ಸಾರಿಗೆ ಹಾಗೂ ಅಗ್ಗದ ವಿಮಾನ ಪ್ರಯಾಣ ದರಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ರೈಲ್ವೆ, ಶತಾಬ್ದಿ ಎಕ್ಸ್‌ಪ್ರೆಸ್, ತೇಜಸ್ ಹಾಗೂ ಗತಿಮನ್ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಕೆಲವು ರೈಲುಗಳ ಹಾಲಿ ಪ್ರಯಾಣ ದರಗಳಲ್ಲಿ ಶೇ.25ರಷ್ಟು ರಿಯಾಯಿತಿ ನೀಡಲು ನಿರ್ಧರಿಸಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಚೆನ್ನೈ-ಮೆಸೂರು ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಇದು ಅನ್ವಯವಾಗುವುದಿಲ್ಲ. ದೇಶದಲ್ಲಿ ಸಂಚರಿಸುತ್ತಿರುವ ಎಲ್ಲಾ ರೈಲುಗಳ ಕಳೆದ ವರ್ಷದ ಅಂಕಿ-ಅಂಶಗಳನ್ನು ಪರಿಗಣಿಸಿ, ಯಾವ ರೈಲಿನಲ್ಲಿ ಮಾಸಿಕ ಸರಾಸರಿ ಪ್ರಯಾಣಿಕರ ಸಂಖ್ಯೆ ಶೇ.50ಕ್ಕಿಂತ ಕೆಳಗೆ ಕುಸಿದಿದೆಯೋ ಆ ರೈಲುಗಳಿಗೆ ಮಾತ್ರ ಈ ರಿಯಾಯಿತಿ ಘೋಷಿಸಲಾಗುತ್ತದೆ. ರಿಯಾಯಿತಿ ವಾರ್ಷಿಕ, ಅರ್ಧವಾರ್ಷಿಕ, ಮಾಸಿಕವಾಗಿ ಅಥವಾ ವಿಶೇಷ ಅವಧಿಗಳಲ್ಲಿ ಜಾರಿಗೊಳಿಸುವ ಚಿಂತನೆ ನಡೆದಿದೆ. ಟಿಕೆಟ್‌ನ ಮೂಲ ಪ್ರಯಾಣ ದರದಲ್ಲೇ ಶೇ.25 ವಿನಾಯ್ತಿಗೆ ನಿರ್ಧರಿಸಲಾಗಿದೆ.