ಹೊಸದಿಲ್ಲಿ: ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡುವವರಿಗೆ ಭಾರತೀಯ ರೈಲ್ವೆ (ಐಆರ್‌ಸಿಟಿಸಿ) ಸಿಹಿ ಸುದ್ದಿಯೊಂದನ್ನು ನೀಡಿದೆ. ಭೀಮ್ ಆ್ಯಪ್, ಪೇಟಿಎಂ, ಫೋನ್ ಪೇ ಅಥವಾ ಗೂಗಲ್ ಪೇಯಂತಹ ವಾಲೆಟ್‌ಗಳ ಮೂಲಕ ಹಣ ಪಾವತಿಸುವ ಗ್ರಾಹಕರಿಗೆ ಸೇವಾ ಶುಲ್ಕವನ್ನು ಕಡಿತಗೊಳಿಸುವ ಯೋಜನೆ ಹಾಕಿಕೊಂಡಿದೆ.
ಏಕೀಕೃತ ಪಾವತಿ ಸೇವೆ (ಯುಪಿಐ) ಅಥವಾ ಭಾರತ್ ಇಂಟರ್‌ಫೇಸ್ ಫಾರ್ ಮನಿ (ಬಿಹೆಚ್‌ಐಎಂ/ಭೀಮ್) ಅಥವಾ ವಿವಿಧ ವ್ಯಾಲೆಟ್ ಅಪ್ಲಿಕೇಶನ್‌ಗಳ ಮೂಲಕ ಟಿಕೆಟ್ ಮೊತ್ತವನ್ನು ಪಾವತಿಸಿದರೆ ರೈಲು ಪ್ರಯಾಣ ಅಗ್ಗವಾಗಲಿದೆ. ನಾನ್ ಎಸಿ ಬೋಗಿಯಲ್ಲಿ ಪ್ರಯಾಣಿಸುವವರಿಗೆ ಈವರೆಗೆ 10 ರೂ. ಕನ್ವೀನಿಯನ್ಸ್ ಶುಲ್ಕ ಹಾಗೂ ಪ್ರಥಮ ದರ್ಜೆ ಸೇರಿದಂತೆ ಎಸಿ ಕೋಚ್‌ನ ಪ್ರಯಾಣಿಕರಿಗೆ 20 ರೂ. ಕನ್ವೀನಿಯನ್ಸ್ ಶುಲ್ಕ ಕಡಿಮೆಯಾಗಲಿದೆ.
ರೈಲ್ವೆ ಹೇಳಿದ ವ್ಯಾಲೆಟ್, ಭೀಮ್ ಮೂಲಕ ಪಾವತಿ ಮಾಡಿದವರಿಗೆ ಶುಲ್ಕದಿಂದ ವಿನಾಯಿತಿ ಸಿಗಲಿದೆ. ಹೊಸ ಶುಲ್ಕ ಪಟ್ಟಿ ಶೀಘ್ರದಲ್ಲೇ ಹೊರತರಲಾಗುವುದು ಎಂದು ರೈಲ್ವೆ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಪ್ರಸ್ತುತ ಭಾರತೀಯ ರೈಲ್ವೆ ಇಲಾಖೆ ನಾನ್ ಎಸಿ ಇ-ಟಿಕೆಟ್‌ಗೆ 15 ರೂ. ಮತ್ತು ಎಸಿ ಕೋಚ್‌ಗಳ ಪ್ರತಿ ಟಿಕೆಟ್‌ಗೆ 30 ರೂ. ಶುಲ್ಕ ವಿಧಿಸುತ್ತಿದೆ. ದೇಶದಲ್ಲಿ ಆನ್ಲೈನ್ ಪೇಮೆಂಟ್ ಉತ್ತೇಜಿಸುವ ದೃಷ್ಟಿಯಿಂದ ರೈಲ್ವೆ ಈ ನಿರ್ಧಾರವನ್ನು ಕೈಗೊಂಡಿದ್ದು, ಜತೆಗೆ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.
ಈ ಮೊದಲು ಐಆರ್‌ಸಿಟಿಸಿ ಲಕ್ಕಿ ಡ್ರಾ ಯೋಜನೆಯೊಂದನ್ನು ಪ್ರಕಟಿಸಿದ್ದು, ಯುಪಿಐ ಅಥವಾ ಭೀಮ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿದ 1 ಸಾವಿರ ಅದೃಷ್ಟವಂತ ಗ್ರಾಹಕರಿಗೆ 500 ರೂ. ಕ್ಯಾಶ್‌ಬ್ಯಾಕ್ ಅನ್ನು ನೀಡಿತ್ತು.