ಬೆಂಗಳೂರು: ಹೆಸರಿಗೆ ಮಾತ್ರ ಅದು ರೈಲ್ವೆ ತಂಗುದಾಣ. ನೀವು ಒಳಹೊಕ್ಕರೆ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಅನುಭವ! ಸಾಮಾನ್ಯವಾಗಿ ಹಾಲ್ಟ್ ಸ್ಟೇಷನ್ ಗಳೆಂದರೆ ಒಂದು ಟಿಕೆಟ್ ಕೌಂಟರ್, ನಿಲುಗಡೆಗೊಂದು ಪ್ಲಾಟ್‌ಫಾರಂ ಇರುತ್ತದೆ. ಪ್ರಮುಖ ರೈಲುನಿಲ್ದಾಣವಾಗಿದ್ದರೆ, ಈ ಸೌಲಭ್ಯಗಳು ತುಸು ಹೆಚ್ಚಿರುತ್ತವೆ. ಆದರೆ, ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಲ್ಟ್ ಸ್ಟೇಷನ್ ನಿಮ್ಮ ಈ ಎಲ್ಲ ಕಲ್ಪನೆಗಳನ್ನು ತಲೆಕೆಳಗೆ ಮಾಡುತ್ತದೆ.
ಹೌದು, ಈ ನೂತನ ಹಾಲ್ಟ್ ಸ್ಟೇಷನ್‌ನಲ್ಲಿ ವಿಮಾನಗಳ ಹಾರಾಟದ ಬಗ್ಗೆ ನೇರಪ್ರಸಾರಫಲಕಗಳಲ್ಲಿ ನೇರ ಪ್ರಸಾರ ಆಗುತ್ತದೆ. ಹೈಟೆಕ್‌ಕೌಂಟರ್‌ಗಳು, ಸೆನ್ಸರ್ ಆಧಾರಿತ ವಾಷ್‌ರೂಂಗಳು, ಕಾಫಿ ಶಾಪ್, ರೈಲ್ವೆ ವೇಳಾಪಟ್ಟಿ, ಶೆಟಲ್ ಸೇವೆಗಳು, ಹೊರಾಂಗಣದಲ್ಲಿ ಸಂಸ್ಕೃತಿಯನ್ನು ಬಿಂಬಿಸುವ ಕಲಾಕೃತಿ (ಇದನ್ನು ಮಾವಿನ ಕ್ರೇಟ್ ಹಾಗೂ ನಿರುಪಯುಕ್ತವಸ್ತುಗಳಿಂದ ರೂಪಿಸಲಾಗಿದೆ!) ಹಾಗೂ ಆಕರ್ಷಕ ಲ್ಯಾಂಡ್‌ಸ್ಕೇಪ್, ಆಸನಗಳ ವ್ಯವಸ್ಥೆಕಲ್ಪಿಸಲಾಗಿದೆ. ಇದೆಲ್ಲದರಿಂದಾಗಿ ಪ್ರಯಾಣಿಕರಿಗೆ ಇದು ಅಕ್ಷರಶಃ ಹತ್ತಿರದಲ್ಲೇ ಇರುವ ಏರ್ ಪೋರ್ಟ್ ಲಾಂಜ್‌ನ ಅನುಭವ ನೀಡುತ್ತದೆ.
ಆಶ್ಚರ್ಯಗೊಂಡ ಪ್ರಯಾಣಿಕರು: ಸೋಮವಾರ ಬೆಳಗ್ಗೆ 4.45ಕ್ಕೆ ಸರಿಯಾಗಿ ಡೆಮು ರೈಲು ಮೆಜೆಸ್ಟಿಕ್‌ನ ಕೆಎಸ್‌ಆರ್ ರೈಲು ನಿಲ್ದಾಣದಿಂದ ಹೊರಟಿತು. ಮೊದಲ ದಿನ ಹಾಗೂ ಮೊದಲ ರೈಲು ಮತ್ತು ಬೆಳಗಿನಜಾವ ಆಗಿದ್ದರಿಂದ 12 ಜನ ಮಾತ್ರ ಪ್ರಯಾಣಿಕರಿದ್ದರು. ಅವರೊಂದಿಗೆ ಸಂಸದ ಪಿ.ಸಿ.ಮೋಹನ್, ಬೆಂಗಳೂರು ರೈಲ್ವೆವಿಭಾಗೀಯ ವ್ಯವಸ್ಥಾಪಕ ಎ.ಕೆ.ವರ್ಮ, ರೈಲ್ವೆ ಅಧಿಕಾರಿಗಳು ಇದಕ್ಕೆ ಸಾಕ್ಷಿಯಾದರು. 6.02ಕ್ಕೆ ರೈಲು ಹಾಲ್ಟ್ ಸ್ಟೇಷನ್ ಗೆ ಬರುತ್ತಿದ್ದಂತೆ, ಪ್ರಯಾ ಣಿಕರೆಲ್ಲರೂ ಕರತಾಡನದೊಂದಿಗೆ ಸಂತಸ ವ್ಯಕ್ತಪಡಿಸಿದರು.
ಅವಶ್ಯಕತೆಗನುಗುಣವಾಗಿ ರೈಲು ಸೇವೆ: ವಿಮಾನಗಳ ದಟ್ಟಣೆ ಅವಧಿಗೆ ಅನುಗುಣವಾಗಿ ಈ ರೈಲುಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸದ್ಯ ನಿತ್ಯ ಐದು ರೈಲುಗಳು ಸಂಚರಿಸಲಿವೆ. ವಿಮಾನಗಳು ಹೆಚ್ಚು ಸಂಚರಿಸುವ ವೇಳೆ ರೈಲುಗಳು ಕಾರ್ಯಾಚರಣೆ ಕೂಡ ಹೆಚ್ಚಲಿದೆ. ಕೆಎಸ್‌ಆರ್ ರೈಲು ನಿಲ್ದಾಣದಿಂದ ಪ್ರಯಾಣದರ 10 ರೂ. ಇದ್ದು, ಕೆಎಸ್‌ಆರ್‌ನಿಂದ ಕಂಟೋನ್ಮೆಂಟ್ ಮೂಲಕ ಹಾದು ಹೋಗುವ ರೈಲಿನ ಪ್ರಯಾಣ ದರ 15 ರೂ. ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹಾಫ್ ಟೀ ದರದಲ್ಲಿ ರೈಲು ಸೇವೆ!: ಈ ವೇಳೆ ಸಂಸದ ಪಿ.ಸಿ.ಮೋಹನ್ ಮಾತನಾಡಿ, “20 ರೂ.ಗೆ ಟೀ ಅಥವಾ ಕಾಫಿ ಕೂಡ ಸಿಗುವುದಿಲ್ಲ. ಅಂತಹದ್ದರಲ್ಲಿ ಅದರರ್ಧ ದರದಲ್ಲಿ ಅಂದರೆ 10ರೂ.ಗಳಲ್ಲಿ ರೈಲು ನಮ್ಮನ್ನು ನಗರದಿಂದ ವಿಮಾನನಿಲ್ದಾಣಕ್ಕೆ ಕರೆದೊಯ್ಯುತ್ತದೆ ಎನ್ನುವುದೇ ಖುಷಿಯ ಸುದ್ದಿ. ಇದನ್ನು ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನ ಸದುಪಯೋಗ ಪಡಿಸಿಕೊಳ್ಳಬೇಕು. ನಿಲ್ದಾಣದಲ್ಲಿ ಎಲ್ಲ ರೀತಿಯಹೈಟೆಕ್ ಸೌಲಭ್ಯಗಳಿದ್ದು, ಇದಕ್ಕೆ ಕಾರಣವಾದ ರೈಲ್ವೆ ಮತ್ತು ಬಿಐಎಲ್ ಕಾರ್ಯ ನಿಜಕ್ಕೂ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲು ನಿಲ್ದಾಣ ಪ್ರಯಾಣಿಕರ ಸೇವೆಗೆ ಮುಕ್ತವಾಗಿದೆ. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದ್ದು, ಜನ ದಟ್ಟಣೆಯನ್ನು ಪರಿಣಾಮಕಾರಿಯಾಗಿ ತಗ್ಗಿಸುವಲ್ಲಿ ಸಹಕಾರಿಯಾಗಲಿದೆ.
– ಪಿಯೂಶ್ ಗೋಯಲ್, ರೈಲ್ವೆ ಸಚಿವ
2008ರಿಂದ ಉಪನಗರ ರೈಲು ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಸತತವಾಗಿ ಆಗ್ರಹಿಸುತ್ತಾ ಬಂದವರಲ್ಲಿ ರಾಜ್ಯಸಭೆ ಮಾಜಿ ಸದಸ್ಯ ಪ್ರೊ.ರಾಜೀವ್‌ಗೌಡ ಮುಂಚೂಣಿಯಲ್ಲಿದ್ದಾರೆ. ಈಗ ಆ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ರಾಜೀವ್‌ಗೌಡ ಸೇರಿದಂತೆ ಪಕ್ಷದ ಹಲವು ನಾಯಕರು ಪ್ರಯಾಣಿಸಿದರು.
– ಕಾಂಗ್ರೆಸ್ ಟ್ವೀಟ್
ಸಿಬ್ಬಂದಿ ನಿತ್ಯ ಬಂದು-ಹೋಗಲು ಸಾಕಷ್ಟು ಕಿರಿಕಿರಿ ಆಗುತ್ತಿತ್ತು. ಹಾಲ್ಟ್ ಸ್ಟೇಷನ್ ಮಾಡಿರುವುದರಿಂದ ಸಕಾಲಕ್ಕೆ ಕೆಲಸಕ್ಕೆ ಬರಲು ಸಾಧ್ಯವಾಗುತ್ತದೆ. ಜತೆಗೆ ಸಮಯ ಉಳಿತಾಯ ಆಗುವುದರಿಂದ ಕುಟುಂಬದ ಸದಸ್ಯರೊಂದಿಗೆ ಆ ಸಮಯವನ್ನು ಕಳೆಯಬಹುದಾಗಿದೆ.
– ಡಯಾನ, ಏರ್‌ಪೋರ್ಟ್ ಸಿಬ್ಬಂದಿ.
ಮೆಜೆಸ್ಟಿಕ್‌ನಿಂದ ವಿಮಾನ ನಿಲ್ದಾಣಕ್ಕೆ ರೈಲು ಸೇವೆ ಮಾಡಿರುವುದು ಸಾಕಷ್ಟು ಅನುಕೂಲವಾಗಿದೆ. ಇದರಿಂದ ಒಂದು ಗಂಟೆಯಲ್ಲಿ ವಿಮಾನ ನಿಲ್ದಾಣ ತಲುಪಬಹುದು. ಯಾವುದೇ ಟ್ರಾಫಿಕ್ ಸಮಸ್ಯೆ ಇರುವುದಿಲ್ಲ. ಮೊದಲ ದಿನವೇ ಪ್ರಯಾಣ ಮಾಡುತ್ತಿರುವುದು ಸಂತಸವಾಗಿದೆ
– ಪ್ರಿಯಾಂಕ, ಪ್ರಯಾಣಿಕರು