Advertisement

“ಕಾಗದ ರಹಿತ’ಟಿಕೆಟ್‌ ನೆಚ್ಚಿದ ರೈಲು ಪ್ರಯಾಣಿಕರು!

09:52 AM Jan 21, 2020 | Sriram |

ಮಂಗಳೂರು: ಪ್ರಯಾಣಿಕರು ಟಿಕೆಟ್‌ಗಾಗಿ ಸರತಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ರೈಲ್ವೇ ಇಲಾಖೆಯು ಆರಂಭಿಸಿರುವ “ಯುಟಿಎಸ್‌ ಮೊಬೈಲ್‌ ಆ್ಯಪ್‌’ ಜನಪ್ರಿಯಗೊಳ್ಳುತ್ತಿದೆ. ಯುವಜನತೆಯು ಯುಟಿಎಸ್‌ ಮೂಲಕ ಟಿಕೆಟ್‌ ಖರೀದಿಯನ್ನು ನೆಚ್ಚಿಕೊಳ್ಳುತ್ತಿದ್ದಾರೆ.

Advertisement

ಆ್ಯಪ್‌ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರೈಲು ನಿಲ್ದಾಣಗಳಲ್ಲಿ ಟಿಕೆಟ್‌ ಕೌಂಟರ್‌ಗಳ ಮುಂದೆ ಪ್ರಯಾಣಿಕರ ದಟ್ಟನೆ ಕಡಿಮೆ ಯಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಕಾಯುವ ಕಿರಿಕಿರಿ ತಪ್ಪಿದರೆ, ರೈಲ್ವೇ ಸಿಬಂದಿಯ ಹೊರೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ಆ್ಯಪ್‌ ಬಳಕೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವುದಕ್ಕೆ ರೈಲ್ವೇ ಇಲಾಖೆ ಮುಂದಾಗಿದೆ.

ಏನಿದು ಯುಟಿಎಸ್‌ ಆ್ಯಪ್‌?
ಅನ್‌ರಿಸರ್ವ್‌ಡ್‌ ಟಿಕೆಟಿಂಗ್‌ ಸಿಸ್ಟಂ ಎಂಬುದು ಪೇಪರ್‌ಲೆಸ್‌ ಟಿಕೆಟ್‌. ಜನರಲ್‌ ಟಿಕೆಟ್‌ ಬುಕ್‌ ಮಾಡುವವರು ಮೊಬೈಲ್‌ನಿಂದಲೇ ಆ್ಯಪ್‌ ಮೂಲಕ ಟಿಕೆಟ್‌ ಪಡೆಯುವ ಬಹಳ ಸುಲಭದ ವ್ಯವಸ್ಥೆ. ನಗದು ರಹಿತ ವ್ಯವಹಾರದ ಭಾಗವಾಗಿ ಭಾರತೀಯ ರೈಲ್ವೇ ಈ ಸೇವೆ ಒದಗಿಸುತ್ತಿದೆ. ರೈಲು ನಿಲ್ದಾಣಗಳಲ್ಲಿ ಈಗಾಗಲೇ ಆಟೋಮ್ಯಾಟಿಕ್‌ ಟಿಕೆಟ್‌ ವೆಂಡಿಂಗ್‌ ಮೆಷಿನ್‌ಗಳ ಮೂಲಕ ಟಿಕೆಟ್‌ ಪಡೆಯಲು ಅವಕಾಶವಿದೆ. ಯುಟಿಎಸ್‌ ಆ್ಯಪ್‌ ಇನ್ನೂ ಒಂದು ಹೆಜ್ಜೆ ಮುಂದಿದೆ.

5 ಕಿ.ಮೀ. ವ್ಯಾಪ್ತಿ
ಯುಟಿಎಸ್‌ ಆ್ಯಪ್‌ ಮೂಲಕ ನಿಲ್ದಾಣದ ಒಳಗೆ ಬಂದು ಅಥವಾ ರೈಲಿನ ಒಳಗಿದ್ದು ಟಿಕೆಟ್‌ ಪಡೆಯಲು ಅವಕಾಶವಿಲ್ಲ. ರೈಲ್ವೇ ನಿಲ್ದಾಣದಿಂದ ಕನಿಷ್ಠ 25 ಮೀ. ಮತ್ತು ಗರಿಷ್ಠ 5 ಕಿ.ಮೀ. ದೂರದಿಂದ ಟಿಕೆಟ್‌ ಪಡೆಯಬಹುದು. 25 ಮೀ. ಒಳಗೆ “ಜಿಯೋ ಫೆನ್ಸಿಂಗ್‌’ನ್ನು ಹಾಕಲಾಗಿರುತ್ತದೆ. ಪ್ರಯಾಣಿಕರು ಆ್ಯಪ್‌ ಡೌನ್‌ಲೋಡ್‌ ಮಾಡಿ ಆರ್‌ ವ್ಯಾಲೆಟ್‌ (ರೈಲ್ವೇ ವ್ಯಾಲೆಟ್‌)ನಲ್ಲಿ ಜಮೆ ಮಾಡುವ ಮೂಲಕ ಹಣ ಪಾವತಿಸಬಹುದು. ಒಬ್ಬರು ಎಷ್ಟು ಟಿಕೆಟ್‌ಗಳನ್ನು ಕೂಡ ಖರೀದಿಸಬಹುದಾದರೂ ಅಷ್ಟು ಮಂದಿಯೂ ಅವರ ಜತೆ ಪ್ರಯಾಣಿಸಬೇಕಾ ಗುತ್ತದೆ. ಟಿಸಿಗಳು ಟಿಕೆಟ್‌ ಪರಿಶೀಲನೆಗೆ ಬಂದಾಗ ಮೊಬೈಲ್‌ನಲ್ಲಿರುವ ಟಿಕೆಟ್‌ ತೋರಿಸಲು ಅನುಕೂಲವಾಗಬೇಕು. ಸಿಂಗಲ್‌ ಜರ್ನಿ, ಪ್ಲಾಟ್‌ಫಾರಂ ಮತ್ತು ಸೀಸನ್‌ ಟಿಕೆಟ್‌ ಕೂಡ ಪಡೆಯಬಹುದು. ಸೀಸನ್‌ ಟಿಕೆಟ್‌ ನವೀಕರಣವೂ ಸಾಧ್ಯ.

ಮಂಗಳೂರಿನಲ್ಲಿ ತುಳುವಿನಲ್ಲಿಯೂ ಪ್ರಚಾರ!
ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ಯುಟಿಎಸ್‌ ಆ್ಯಪ್‌ ಮಾಹಿತಿಯನ್ನು ಧ್ವನಿವರ್ಧಕ ಮೂಲಕ ಇಂಗ್ಲಿಷ್‌, ಹಿಂದಿ, ಕನ್ನಡ, ಮಲಯಾಳಂ ಜತೆಗೆ ತುಳುವಿನಲ್ಲೂ ನೀಡಲಾಗುತ್ತಿದೆ. ರೈಲ್ವೇ ನಿಲ್ದಾಣ, ಕಚೇರಿಗಳಲ್ಲಿ ತುಳು ಭಾಷೆ ಕೇಳಿಬರುತ್ತಿರುವುದು ಇದೇ ಮೊದಲು.

Advertisement

ವಿಳಂಬವಿಲ್ಲದೆ ಟಿಕೆಟ್‌ ಪಡೆಯಲು ಈ ಆ್ಯಪ್‌ ತುಂಬ ಸಹಕಾರಿ. ನಾನು ಕೆಲವು ದಿನಗಳ ಹಿಂದೆ ರೈಲ್ವೇ ನಿಲ್ದಾಣದಲ್ಲಿ ಇರುವ ಉಚಿತ ವೈಫೈ ಮೂಲಕ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡೆ. ಈಗ ಆ್ಯಪ್‌ನಲ್ಲಿಯೇ ಟಿಕೆಟ್‌ ಪಡೆದು ಕಾಲೇಜಿನಿಂದ ಕಾಂಞಂಗಾಡಿಗೆ ಹೋಗುತ್ತಿದ್ದೇನೆ.
– ಕೌಶಿಕ್‌, ವಿದ್ಯಾರ್ಥಿ

ಬಳಕೆ ಸುಲಭ
ರೈಲ್ವೇ ನಿಲ್ದಾಣದಲ್ಲಿ ಯುವಜನರನ್ನು ಕೇಂದ್ರೀಕರಿಸಿ ಯುಟಿಎಸ್‌ ಆ್ಯಪ್‌ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ತುಳುನಾಡಿನ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ತುಳುವಿನಲ್ಲೂ ಮಾಹಿತಿ ನೀಡುತ್ತಿದ್ದೇವೆ. ಆ್ಯಪ್‌ನ್ನು ಇನ್ನಷ್ಟು ಜನಪ್ರಿಯಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಕಿಶನ್‌ ಕುಮಾರ್‌,ಡೆಪ್ಯುಟಿ ಸ್ಟೇಷನ್‌ ಮಾಸ್ಟರ್‌, ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next