ಹೊಸಪೇಟೆ: ಹೊಸಪೇಟೆ-ಕೊಟ್ಟೂರು ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದ್ದು, ಈ ಭಾಗದ ಜನರ ಎರಡು ದಶಕಗಳ ಹೋರಾಟದ ಬಳಿಕ ಕೊಟ್ಟೂರು-ಹೊಸಪೇಟೆ ರೈಲು ಸಂಚಾರಕ್ಕೆ ಶುಭಾರಂಭ ದೊರೆಯುವ ಎಲ್ಲ ಸಾಧ್ಯತೆಗಳಿದ್ದು ಸೆ. 21ರಂದು ಚಾಲನೆ ಸಿಗಲಿದೆ ಎಂಬ ವಿಶ್ವಾಸ ಗರಿಗೆದರಿದೆ.
ಹೊಸಪೇಟೆಯಿಂದ ಕೊಟ್ಟೂರುವರೆಗೆ ರೈಲು ಸಂಚಾರ ಆರಂಭಿಸುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದ್ದು, ನಿರಂತರ ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ ಎನ್ನುತ್ತಾರೆ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ. ರೈಲು ಸಂಚಾರದಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ರೈಲನ್ನು ಬಳ್ಳಾರಿಯಿಂದ ಓಡಾಡಿಸುವಂತಾಗಬೇಕು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ ಎನ್ನುತ್ತಾರೆ. ಮೊದಲು ಹೊಸಪೇಟೆ ಹಾಗೂ ಕೊಟ್ಟೂರು ರೈಲು ಸಂಚಾರ ಶುರುವಾಗಲಿ. ನಂತರ ಇದನ್ನು ವಿಸ್ತರಿಸುವುದು ಕಷ್ಟವಲ್ಲ. ಬಳ್ಳಾರಿ ಜಿಲ್ಲೆ ರೈಲ್ವೆ ಇಲಾಖೆಗೆ ಅತಿ ಹೆಚ್ಚು ಆದಾಯವನ್ನು ನೀಡಿದ ಜಿಲ್ಲೆ. ದಕ್ಷಿಣ ಮಧ್ಯ ರೈಲ್ವೆಗೆ ಬಳ್ಳಾರಿ ಕೊನೆಯ ಪಾಂಯಿಂಟ್ ಆಗಿದೆ. ಹೀಗಾಗಿ ಬಳ್ಳಾರಿಗೆ ಈ ರೈಲು ವಿಸ್ತರಣೆಯಾದರೆ ಬಳ್ಳಾರಿಯಿಂದ ಹೊಸಪೇಟೆಗೆ ನಿತ್ಯ ಸಾವಿರಾರು ಜನರು ಓಡಾಡುತ್ತಿದ್ದು, ಅವರಿಗೆ ಅನುಕೂಲವಾಗಲಿದೆ. ಬಳ್ಳಾರಿಯಿಂದ ನೇರವಾಗಿ ಕೊಟ್ಟೂರಿಗೆ ತೆರಳುವ ಪ್ರಯಾಣಿಕರ ಸಹ ಹೆಚ್ಚಿನ ಅನುಕೂಲವಾಗಿದೆ ಎಂದು ಮಹೇಶ್ವರ ಸ್ವಾಮಿ ತಿಳಿಸಿದರು.
Advertisement
ಈಗಾಗಲೇ ರೈಲ್ವೆ ಇಲಾಖೆ ಅಧಿಕಾರಿಗಳು ರೈಲ್ವೆ ಸಂಚಾರದ ‘ಗ್ರೀನ್ ಸಿಗ್ನಲ್’ ತೋರಿಸಿದ್ದಾರೆ. ಹೀಗಾಗಿ ರೈಲ್ವೆ ಸಂಚಾರಕ್ಕಾಗಿ ಈವರೆಗೆ ನಡೆಸಿದ ಹೋರಾಟಕ್ಕೆ ಫಲ ನೀಡಿದಂತಾಗಿದೆ. ಪ್ಯಾಸೆಂಜರ್ ರೈಲು ಓಡಾಟ ಆರಂಭಿಸುವುದರಿಂದ ಪೂರಕ ಕಾಮಗಾರಿಗಳು ಚುರುಕುಗೊಂಡಿವೆ. ರೈಲ್ವೆ ನಿಲ್ದಾಣದ ಅಭಿವೃದ್ಧಿ ಸೇರಿದಂತೆ ಪ್ರಯಾಣಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ದಿಸೆಯ ಕೆಲಸಗಳು ಭರದಿಂದ ನಡೆದಿವೆ. ತುಂಗಭದ್ರಾ ಡ್ಯಾಂ ನಿಲ್ದಾಣ, ವ್ಯಾಸನಕೆರೆ ನಿಲ್ದಾಣ, ಹಗರಿಬೊಮ್ಮನಹಳ್ಳಿ ನಿಲ್ದಾಣದಲ್ಲಿ ಕಟ್ಟಡಗಳಿಗೆ ವಿದ್ಯುತ್ ಅಳವಡಿಕೆ ಕಾರ್ಯ ನಡೆದಿದೆ. ಉಳಿದಂತೆ ಹೊಸಪೇಟೆಯಿಂದ ಕೊಟ್ಟೂರುವರೆಗೆ ಸಾಗುವ ದಾರಿ ಮಧ್ಯದಲ್ಲಾಗಬೇಕಾದ ಕಾಮಗಾರಿಗಳು ಚುರುಕಾಗಿದ್ದು ಪ್ಲಾಟ್ಫಾರಂ, ಹೈಟೆಷನ್ ತಂತಿ ಸ್ಥಳಾಂತರ ಕೆಲಸ ಬಹುತೇಕ ಪೂರ್ಣಗೊಂಡಿದೆ.
ಪರಿಶೀಲನೆ ಕಾರ್ಯ:
ರೈಲ್ವೆ ಸುರಕ್ಷತಾ ಅಧಿಕಾರಿಗಳು, ಸೋಮವಾರ ಟ್ರಾಲಿಗಳ ಮೂಲಕ ಹೊಸಪೇಟೆಯಿಂದ ಕೊಟ್ಟೂರುವರೆಗೆ ಹಳಿ ಸುರಕ್ಷತೆ ನಿಲ್ದಾಣ ಹಾಗೂ ರೈಲ್ವೆ ಗೇಟ್‌ಗಳನ್ನು ಪರಿಶೀಲನೆ ಕಾರ್ಯ ನಡೆಸಿದರು. ರೈಲ್ವೆ ಸುರಕ್ಷತಾ ಆಯುಕ್ತ ಮನೋಹರನ್ ಹಾಗೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಹುಬ್ಬಳ್ಳಿ ವಲಯ) ರಾಜೇಶ್ ಮೋಹನ್ ನೇತೃತ್ವದ ತಂಡ, ನಗರದ ರೈಲ್ವೆ ನಿಲ್ದಾಣದಿಂದ ಕೊಟ್ಟೂರು ರೈಲು ಹಳಿ ಮಾರ್ಗದ ಸುರಕ್ಷತೆ ಪರಿಶೀಲನೆ ನಡೆಸಿ, ನೈರುತ್ಯ ವಲಯ ರೈಲ್ವೆ ಇಲಾಖೆ ವರದಿ ನೀಡಲಿದೆ. ಈ ವರದಿ ಆಧಾರಿಸಿ, ದಿನಾಂಕ ನಿಗದಿಯಾಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಈ ವಾರದ ಕೊನೆಯಲ್ಲಿ ನಗರದಿಂದ ಕೊಟ್ಟೂರು ರೈಲು ಓಡಾಟ ಆರಂಭವಾಗಲಿದೆ. ಈ ಮೂಲಕ ಈ ಭಾಗದ ಜನರ ಬಹುದಿನ ಬೇಡಿಕೆ ಈಡೇರಿದಂತಾಗಿದೆ.
ಬಳ್ಳಾರಿವರೆಗೆ ವಿಸ್ತರಣೆಯಾಗಲಿ:
ಹೊಸಪೇಟೆಯಿಂದ ಕೊಟ್ಟೂರಿಗೆ ರೈಲು ಸಂಚಾರ ಆರಂಭಿಸುತ್ತಿರುವುದು ಅತ್ಯಂತ ಖುಷಿ ಸಂಗತಿಯಾಗಿದೆ. ಈ ಭಾಗದಲ್ಲಿ ರೈಲ್ವೆ ಸೌಲಭ್ಯ ಹೆಚ್ಚಳವಾಗಬೇಕು. ಆದರೆ ಬಳ್ಳಾರಿವರೆಗೆ ಈ ರೈಲು ವಿಸ್ತರಣೆಯಾಗಬೇಕು. ಬಡವರಿಗೆ ಅನುಕೂಲವಾಗಲಿದೆ. •ವಿ.ಶಿವಾಚಾರಿ ಡಿ.ಕಗ್ಗಲ್,ಎಲ್ಐಸಿ ಪ್ರತಿನಿಧಿ, ಬಳ್ಳಾರಿ
ಅಶಾಭಾವ:
ಹೊಸಪೇಟೆ-ಕೊಟ್ಟೂರು ನಡುವೆ ರೈಲು ಓಡಾಟಕ್ಕೆ ಈ ಭಾಗದ ಜನರು ಎದುರು ನೋಡುತ್ತಿದ್ದರು. ಇದೀಗ ಶೀಘ್ರ ರೈಲು ಓಡಾಟಕ್ಕೆ ಹಸಿರು ನಿಶಾನೆ ದೊರೆತ್ತಿದೆ. ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಇಂದು ರೈಲು ಮಾರ್ಗದ ಸುರಕ್ಷತೆ ಪರಿಶೀಲನೆ ಮಾಡುತ್ತಿದೆ. ಈ ವಾರದ ಕೊನೆಯಲ್ಲಿ ರೈಲು ಓಡಾಟ ಆರಂಭವಾಗಲಿದೆ ಎಂಬುದು ಆಶಾಭಾವ. •ಕೆ.ಮಹೇಶ್, ಅಧ್ಯಕ್ಷರು,ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ
ಕನಸು ಈಡೇರಿಕೆ:
ರೈಲ್ವೆ ಸುರಕ್ಷತಾ ಆಯುಕ್ತರ ಮಾರ್ಗ ಪರಿಶೀಲನೆ ನಂತರ ಈ ಮಾರ್ಗದಲ್ಲಿ ಪ್ರಯಾಣಿಕರ ರೈಲು ಓಡಾಟದ ದಿನಾಂಕವನ್ನು ನಿರ್ಧರಿಸಲಾಗುತ್ತದೆ. ಹೀಗಾಗಿ ಬಳ್ಳಾರಿ ಜಿಲ್ಲೆಯ ಜನತೆಯ ಎರಡು ದಶಕಗಳ ಕನಸು ಈಡೇರಿದಂತಾಗಿದೆ. ಶೀಘ್ರದಲ್ಲಿ ಸಹಕಾರಗೊಳ್ಳುತ್ತದೆ. •ವೈ.ಯಮುನೇಶ್, ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷರು
•ಪಿ.ಸತ್ಯನಾರಾಯಣ