Advertisement
ಎಂಜಿನ್ ಇಲ್ಲದೇ ಓಡಿದ್ದು ಹೇಗೆ?: ಕೆಸಿಂಗಾದಿಂದ ತಿತ್ಲಾಗಢಕ್ಕೆ ಸಾಗುವ ದಾರಿ ಸಂಪೂರ್ಣ ಇಳಿಜಾರಿನಿಂದ ಕೂಡಿದೆ. ಅಹಮದಾಬಾದ್ ಕಡೆಯಿಂದ ಕೆಸಿಂಗಾ ದಾಟಿ ತಿತ್ಲಾಗಢಕ್ಕೆ ರೈಲು ಬಂದಾಗ, ತಿತ್ಲಾಗಢದಲ್ಲಿ ರೈಲನ್ನು ನಿಲ್ಲಿಸಿ ಎಂಜಿನ್ ಅನ್ನು ಬೇರ್ಪಡಿಸಲಾಗಿತ್ತು. ಎಂಜಿನ್ ಅನ್ನು ತೆಗೆದಾಗ ಸ್ಕಿಡ್ ಬ್ರೇಕ್‌ಗಳನ್ನು ಬೋಗಿಗಳಿಗೆ ಹಾಕಲಾಗುತ್ತದೆ. ಆದರೆ ಶನಿವಾರ ರಾತ್ರಿ ರೈಲು ಬಂದು ನಿಂತಾಗ ಇಲ್ಲಿನ ಸಿಬ್ಬಂದಿ ಸ್ಕಿಡ್ ಬ್ರೇಕ್ ಹಾಕದೇ ಎಂಜಿನ್ ತೆಗೆದಿದ್ದರು. ಹೀಗಾಗಿ ಎಂಜಿನ್ ಬೇರ್ಪಡುತ್ತಿದ್ದಂತೆಯೇ, ಇಳಿಜಾರಿದ್ದಿದ್ದರಿಂದ ಹಿಮ್ಮುಖವಾಗಿ, ಅಂದರೆ ಕೆಸಿಂಗಾ ಕಡೆಗೆ ರೈಲಿನ 22 ಬೋಗಿಗಳೂ ಚಲಿಸಲು ಆರಂಭಿಸಿದವು. ರಾತ್ರಿ 9.35ರ ವೇಳೆ ರೈಲು ಹಿಮ್ಮುಖವಾಗಿ ಚಲಿಸುತ್ತಿದ್ದಂತೆಯೇ ಒಳಗಿದ್ದ ಪ್ರಯಾಣಿಕರು ಗಾಬರಿಯಾದರು. ಹಲವರು ಜೀವಭಯದಿಂದ ಕಿರುಚತೊಡಗಿದರು. ಆದರೆ ಮಧ್ಯದಲ್ಲೇ ರೈಲು ನಿಲ್ಲಿಸುವುದು ಅಪಾಯಕಾರಿಯಾದ್ದರಿಂದ ಅಧಿಕಾರಿಗಳು ಕೆಸಿಂಗಾವರೆಗೂ ರೈಲನ್ನು ತೆರಳಲು ಬಿಟ್ಟರು. ಕೆಸಿಂಗಾಗೆ ರೈಲು ಬಂದಾಗ 10.15 ನಿಮಿಷವಾಗಿತ್ತು. ಯಾವುದೇ ವೇಗವರ್ಧಕವಿಲ್ಲದ್ದರಿಂದ ಗುರುತ್ವಾಕರ್ಷಣೆಯ ಬಲದಿಂದಲೇ ಕೇವಲ ಗಂಟೆಗೆ 20 ಕಿ.ಮೀ ವೇಗದಲ್ಲಿ ರೈಲು ಚಲಿಸಿತ್ತು.
ಬೋಗಿಗಳು ಕೆಸಿಂಗಾ ತಲುಪುವಷ್ಟರಲ್ಲಿ ಹಳಿಗಳ ಮೇಲೆ ಕಲ್ಲುಗಳನ್ನು ಹಾಕಿ ಬೋಗಿಗಳನ್ನು ನಿಲ್ಲಿಸಲಾಯಿತು. ಜತೆಗೆ, ಕೆಸಿಂಗಾದಲ್ಲಿ ರೈಲ್ವೆ ಅಧಿಕಾರಿಗಳು ಇನ್ನೊಂದು ಎಂಜಿನ್ ವ್ಯವಸ್ಥೆ ಮಾಡಿದ್ದರು. ಅಲ್ಲಿ ಅದನ್ನು ಅಳವಡಿಸಿ ರೈಲನ್ನು ರಾತ್ರಿ 12.35 ರ ವೇಳೆಗೆ ಪುನಃ ಪುರಿ ಕಡೆಗೆ ಕಳುಹಿಸಲಾಯಿತು. ಈ ಹಿಂದೆಯೂ ಇದೇ ರೀತಿ ಸನ್ನಿವೇಶಗಳು ಹಲವು ಬಾರಿ ಎದುರಾಗಿವೆ. ಕಳೆದ ನವೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ಎಲೆಕ್ಟ್ರಿಕ್ ರೈಲು 13 ಕಿ.ಮೀ ಕೋಚ್‌ಗಳಿಲ್ಲದೇ ಸಾಗಿತ್ತು. ನಂತರ ರೈಲ್ವೆ ಅಧಿಕಾರಿಗಳು ಬೈಕ್‌ನಲ್ಲಿ ಬೆನ್ನಟ್ಟಿ ಹೋಗಿ ನಿಯಂತ್ರಿಸಿದ್ದರು.