ಮಂಗಳೂರು: ಕುಲಶೇಖರ ಮತ್ತು ಪಡೀಲ್ ನಡುವಣ ರೈಲು ಹಳಿಯಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಬುಧವಾರ ಈ ಮಾರ್ಗದಲ್ಲಿ ಒಂದು ರೈಲಿನ ಸಂಚಾರವನ್ನು ರದ್ದುಪಡಿಸಿದ್ದು, ಇತರ 6 ರೈಲುಗಳು ವಿಳಂಬವಾಗಿ ಸಂಚರಿಸಿವೆ.
ತೋಕೂರು- ಮಂಗಳೂರು ವಿಭಾಗದ ಕುಲಶೇಖರ ಮತ್ತು ಪಡೀಲ್ ನಡುವಣ ರೈಲು ಹಳಿಯ ಕೆಲವು ಕ್ಲಿಪ್‌ಗ್ಳು ತುಂಡಾಗಿ ಅಪಾಯದ ಸಿಗ್ನಲ್ ತೋರಿಸುತ್ತಿರುವ ಬಗ್ಗೆ ಗಸ್ತು ಕಾರ್ಯ ನಡೆಸುತ್ತಿದ್ದ ಹಳಿ ನಿರ್ವಾಹಕ ಚಂದನ್ ಕುಮಾರ್ ಅವರು ಮಂಗಳವಾರ ತಡರಾತ್ರಿ 1.10 ಗಂಟೆಗೆ ಗಮನಿಸಿ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು.
ಈ ಹಿನ್ನೆಲೆಯಲ್ಲಿ ಈ ಸಂದರ್ಭ ಕೇರಳದ ಕಡೆಗೆ ಸಂಚರಿಸುತ್ತಿದ್ದ ಯೋಗ್ ನಗರಿ ಹೃಷಿಕೇಶ್- ಕೊಚ್ಚುವೇಲಿ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು (ನಂ. 06098) ಕುಲಶೇಖರದಲ್ಲಿ ತಡೆ ಹಿಡಿಯಲಾಗಿತ್ತು. ಬಳಿಕ ದುರಸ್ತಿ ಕಾಮಗಾರಿ ಕೈಗೊಂಡು 6.13 ಗಂಟೆ ವೇಳೆಗೆ ಪೂರ್ತಿಗೊಳಿಸಿ 7 ಗಂಟೆ ವೇಳೆಗೆ ಈ ರೈಲು ಮಂಗಳೂರು ಜಂಕ್ಷನ್ ತಲುಪಿ ಯಾನ ಮುಂದುವರಿಸಿತು. ಈ ರೈಲು 315 ನಿಮಿಷ ವಿಳಂಬವಾಗಿ ಸಂಚರಿಸಿದೆ.
ಮಂಗಳೂರು ಸೆಂಟ್ರಲ್- ಮಡಗಾಂವ್ ಇಂಟರ್ ಸಿಟಿ ವಿಶೇಷ ರೈಲಿನ (ನಂ. 06602) ಯಾನವನ್ನು ಬುಧವಾರ ರದ್ದುಪಡಿಸಲಾಗಿತ್ತು.
ತಿರುವನಂತಪುರ- ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ (ನಂ. 02431) ವಿಶೇಷ ರೈಲು, ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್ (ನಂ. 06585) ವಿಶೇಷ ರೈಲು, ನಾಗರ್‌ಕೋವಿಲ್- ಗಾಂಧಿಧಾಮ್ ಎಕ್ಸ್‌ಪ್ರೆಸ್ (06336), ಲೋಕಮಾನ್ಯ ತಿಲಕ್ ಮುಂಬಯಿ- ತಿರುವನಂತಪುರ ನೇತ್ರಾವತಿ ಎಕ್ಸ್‌ಪ್ರೆಸ್ (06345), ಎರ್ನಾಕುಳಂ ಜಂಕ್ಷನ್- ಹಜ್ರತ್ ನಿಜಾಮುದ್ದೀನ್ ದುರಂತೊ ಸಾಪ್ತಾಹಿಕ ಎಕ್ಸ್‌ಪ್ರೆಸ್ (02283) ವಿಶೇಷ ರೈಲು ತಡವಾಗಿ ಸಂಚರಿಸಿವೆ.
ಈ ಮಾರ್ಗದಲ್ಲಿ ಸಂಚರಿಸಬೇಕಾಗಿದ್ದ ರೈಲುಗಳು ಹಳಿ ದುರಸ್ತಿ ಆಗುವ ತನಕ ಮಂಗಳೂರು ಜಂಕ್ಷನ್, ಮಂಜೇಶ್ವರ, ಸುರತ್ಕಲ್, ಕಾಸರಗೋಡು ರೈಲು ನಿಲ್ದಾಣಗಳಲ್ಲಿ ನಿಲುಗಡೆ ಮಾಡಿ ಬಳಿಕ ನಿರ್ಗಮಿಸಿದ್ದವು.