Advertisement
ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆ ಪ್ರಕಾರ ನಾಲ್ಕು ವಿಸ್ತರಿಸಿದ ಹಾಗೂ ಎರಡು ಹೊಸ ಮಾರ್ಗಗಳೂ ಸೇರಿದಂತೆ ಎರಡನೇ ಹಂತದಲ್ಲಿ ಪ್ರತಿ ಮೂರು ನಿಮಿಷಗಳ ಅಂತರದಲ್ಲಿ ಮೆಟ್ರೋ ಕಾರ್ಯಾಚರಣೆಗೆ ಉದ್ದೇಶಿಸಲಾಗಿತ್ತು. ಇದರ ಜತೆಗೆ ಕೈಗೆತ್ತಿಕೊಂಡ ಹೊಸ ಮಾರ್ಗಗಳಲ್ಲೂ ಹೆಚ್ಚು- ಕಡಿಮೆ ಇದೇ ಅಂತರದಲ್ಲಿ ಯೋಜನೆ ವಿನ್ಯಾಸಗೊಳಿಸಲಾಗಿದೆ.
Related Articles
Advertisement
ಸದ್ಯ “ನಮ್ಮ ಮೆಟ್ರೋ’ ಮೊದಲ ಹಂತದಲ್ಲಿ ರೈಲು ಸೇವೆಗಳ ಕನಿಷ್ಠ ಅಂತರ 3 ನಿಮಿಷ ಇದ್ದು, “ಪೀಕ್ ಅವರ್’ನಲ್ಲಿ ನೇರಳೆ ಮಾರ್ಗದಲ್ಲಿ ಪ್ರತಿ ಮೂರೂವರೆ ನಿಮಿಷಕ್ಕೊಂದು ರೈಲು ಸಂಚರಿಸುತ್ತಿದೆ. ದೆಹಲಿಯಲ್ಲಿ ಪ್ರಸ್ತುತ ಅತ್ಯಂತ ಕಡಿಮೆ ಒಂದೂವರೆ ನಿಮಿಷ ಅಂತರದಲ್ಲಿ ಮೆಟ್ರೋ ರೈಲು (3ನೇ ಹಂತದಲ್ಲಿ ಮಾತ್ರ)ಕಾರ್ಯಾಚರಣೆ ಮಾಡುತ್ತಿದೆ. ಉಳಿದ ಯಾವ ಮೆಟ್ರೋ ರೈಲುಗಳೂ ಇಷ್ಟು ಅಲ್ಪ ಅಂತರದಲ್ಲಿ ಓಡಾಡುತ್ತಿಲ್ಲ.
ಎಲ್ಲಿ ತಡವಾಗುತ್ತಿದೆ?: ಮೊದಲ ಹಂತದಲ್ಲಿ 3 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲು ಸೇವೆ ಕಲ್ಪಿಸಲು ಸಾಧ್ಯವಿದೆ. ಆದರೆ, ಇದಕ್ಕೆ ಟರ್ಮಿನಲ್‌ಗಳಲ್ಲಿ ಹಿನ್ನಡೆ ಆಗುತ್ತಿದೆ. ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ಯಲಚೇನಹಳ್ಳಿ ಮತ್ತು ನಾಗಸಂದ್ರದಲ್ಲಿ ಪ್ರಯಾಣಿಕರೆಲ್ಲಾ ಇಳಿದ ನಂತರ ತುಸು ದೂರ ಹೋಗಿ, ತಿರುಗಿಸಿಕೊಂಡು ಪಕ್ಕದ ಲೈನ್‌ಗೆ ಬರುತ್ತದೆ.
ಇದಕ್ಕೆ ಕನಿಷ್ಠ ಮೂರರಿಂದ ಮೂರೂವರೆ ನಿಮಿಷ ಹಿಡಿಯುತ್ತಿದೆ. ಈ ಸಮಯ ತಗ್ಗಿಸುವ ಅವಶ್ಯಕತೆ ಇದೆ ಎಂದು ಕಾರ್ಯಾಚರಣೆ ವಿಭಾಗದ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ. ಪ್ರಸ್ತುತ ಮ್ಯಾನುವಲ್ ರೈಲನ್ನು ತಿರುಗಿಸಿಕೊಂಡು ಬರಲಾಗುತ್ತಿದೆ. ಆಟೋ ಟರ್ನ್ ಬ್ಯಾಕ್ ವ್ಯವಸ್ಥೆ ಮೂಲಕ ಇದು ಸಾಧ್ಯವಿದೆ ಎಂದೂ ಅವರು ವಿವರಿಸಿದರು.
96 ಬೋಗಿಗಳಿಗೆ ಆರ್ಡರ್: ಈ ಮಧ್ಯೆ ಬಿಇಎಂಎಲ್ (ಭಾರತ್ ಅರ್ಥ್ ಮೂವರ್ ಲಿ.,)ಗೆ ಆರು ಬೋಗಿಗಳನ್ನಾಗಿ ಪರಿವರ್ತಿಸಲು 150 ಬೋಗಿಗಳ ಆರ್ಡರ್ ನೀಡಿದ್ದು, ಈ ಪೈಕಿ 9 ಬೋಗಿಗಳನ್ನು ಪೂರೈಸಲಾಗಿದೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ಮೊದಲ ಹಂತದಲ್ಲಿ ಕಾರ್ಯಾಚರಣೆ ಅಂತರ ಕಡಿಮೆಯಿಂದ ಬೋಗಿಗಳ ಸಂಖ್ಯೆ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ 96 ಬೋಗಿಗಳಿಗೆ ಆರ್ಡರ್ ನೀಡಲಾಗಿದೆ.
ಡಿಟಿಜಿ ತಂತ್ರಜ್ಞಾನ: “ನಮ್ಮ ಮೆಟ್ರೋ’ ಡಿಟಿಜಿ (ಡಿಸ್ಟನ್ಸ್ ಟು ಗೋ) ತಂತ್ರಜ್ಞಾನ ಅಳವಡಿಸಿಕೊಂಡಿದೆ. ಆಗ ಚಾಲ್ತಿಯಲ್ಲಿದ್ದದ್ದೂ ಇದೇ. ಆದರೆ, ಈಗ ಇದರ ಮುಂದುವರಿದ ಸಿಬಿಟಿಸಿ (ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್) ತಂತ್ರಜ್ಞಾನ. ಡಿಟಿಜಿ ಅಡಿ ಬ್ಲಾಕ್ ಸಿಸ್ಟ್‌ಂ ಇರುತ್ತದೆ. ನಿರ್ದಿಷ್ಟ ಬ್ಲಾಕ್‌ಗಳಲ್ಲಿ ರೈಲಿನ ಪ್ರವೇಶವನ್ನು ಸೂಚಿಸುತ್ತದೆ. ಆದರೆ, ಸಿಬಿಟಿಸಿನಲ್ಲಿ ಪ್ರತಿ ರೈಲಿನ ನಿರ್ದಿಷ್ಟ ಸ್ಥಳವನ್ನು ನಿಖರವಾಗಿ ಹೇಳುತ್ತದೆ.
ಮೆಟ್ರೋ ಹೊಸ ಮಾರ್ಗಗಳಲ್ಲಿ ಎರಡು ನಿಮಿಷಕ್ಕೊಂದು ರೈಲುಗಳ ಸೇವೆ ಕಲ್ಪಿಸುವಂತೆ ಯೋಜನೆಯನ್ನು ವಿನ್ಯಾಸಗೊಳಿಸಲು ಚಿಂತನೆ ನಡೆದಿದ್ದು, ಈ ನಿಟ್ಟಿನಲ್ಲಿ ಸಾಧಕ-ಬಾಧಕಗಳ ಕುರಿತ ಚರ್ಚೆ ನಡೆದಿದೆ. ವಿಸ್ತರಿಸಿದ ಮಾರ್ಗಗಳಲ್ಲೂ ಇದೇ ವಿನ್ಯಾಸ ರೂಪಿಸಲು ಚಿಂತನೆ ನಡೆದಿದೆ. 2030ರ ನಂತರ ಇದರ ಅವಶ್ಯಕತೆ ಇದೆ. -ಅಜಯ್ ಸೇಠ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿ. * ವಿಜಯಕುಮಾರ್ ಚಂದರಗಿ