ಚೆನ್ನೈ: ಮೂವತ್ತು ವರ್ಷಗಳಷ್ಟು ಹಿಂದಿನ ಶತಾಬ್ದಿ ರೈಲಿಗೆ ಪರ್ಯಾಯವಾಗಿ ಬರಲಿರುವ “ಟ್ರೇನ್ 18′, ಇದೇ 29ರಂದು ತನ್ನ ಮೊದಲ ಪ್ರಯಾಣ ಆರಂಭಿಸಲಿದೆ. ಅಂದಾಜು 100 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿರುವ, ದೇಶದ ಮೊದಲ “ಇಂಜಿನ್ ಲೆಸ್’ ರೈಲು ತನ್ನ ಮೊದಲ ಪ್ರಯಾಣದಲ್ಲಿ ದೆಹಲಿಯಿಂದ ಭೋಪಾಲ್ ನಡುವಿನ 707 ಕಿ.ಮೀ. ದೂರವನ್ನು ಕ್ರಮಿಸಲಿದೆ.
1988ರಿಂದ ಚಾಲ್ತಿಗೆ ಬಂದು, ದೇಶದ 20 ಮಾರ್ಗಗಳಲ್ಲಿ ಸಂಚರಿಸುತ್ತಿರುವ ಹಾಗೂ ಎಲ್ಲಾ ಮೆಟ್ರೋ ನಗರಗಳ ನಡುವೆ ಸಂಪರ್ಕ ಸಾಧಿಸಿರುವ ಶತಾಬ್ದಿ ರೈಲಿನ ಗರಿಷ್ಠ ವೇಗ 130 ಕಿ.ಮೀ. ಆಗಿದ್ದರೆ, ಸೆಲ್ಫ್ ಪ್ರೊಪಲ್ಶನ್ ತಂತ್ರ ಜ್ಞಾನದ ಮೂಲಕ ಚಲಿಸುವ “ಟ್ರೈನ್ 18′ ರೈಲಿನ ವೇಗ ಗಂಟೆಗೆ 160 ಕಿ.ಮೀ. ಇದೆ. ಹಾಗಾಗಿ, ಶತಾಬ್ದಿಯ ಒಟ್ಟು ಪ್ರಯಾಣಾವಧಿ ಗಿಂತ 15 ನಿಮಿಷಗಳ ಉಳಿತಾಯ ಹೊಸ
ರೈಲಿನಿಂದ ಆಗಲಿದೆ.
ಹೊಸ ರೈಲಿನಲ್ಲಿ 14 ಸಾಮಾನ್ಯ ಹಾಗೂ 2 ಐಶಾರಾಮಿ ಕೋಚ್ ಸೇರಿ ಒಟ್ಟು 16 ಕೋಚ್ ಗಳಿದ್ದು, ಎಲ್ಲಾ ಕೋಚ್‌ಗಳೂ ಹವಾ ನಿಯಂತ್ರಿತ ಹಾಗೂ ಸಿಸಿಟಿವಿ ಕ್ಯಾಮೆರಾ ಸೌಲಭ್ಯ ಹೊಂದಿವೆ. ಅಲ್ಲದೆ, ಸ್ವಯಂಚಾಲಿತ ಬಾಗಿಲು, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಈ ರೈಲಿನ ಇನ್ನಿತರ ವಿಶೇಷಗಳಾಗಿವೆ.