ಕೋವಿಡ್ ಭಯ ನಿಧಾನವಾಗಿ ದೂರವಾಯ್ತು, ಥಿಯೇಟರ್‌ಗಳಲ್ಲಿ 100% ಪ್ರವೇಶಾತಿ ಸಿಕ್ಕಾಯ್ತು, ರಿಲೀಸ್‌ಗಾಗಿ ವರ್ಷದಿಂದ ಕಾದು ಕುಳಿತಿದ್ದ “ಸಲಗ’, “ಕೋಟಿಗೊಬ್ಬ-3′ ಅಂತಹ ಬಿಗ್ ಬಜೆಟ್ ಸ್ಟಾರ್ ಸಿನಿಮಾಗಳೂ ರಿಲೀಸ್ ಆಯ್ತು, ಬಾಕ್ಸಾಫೀಸ್‌ನಲ್ಲಿ ಸೌಂಡ್ ಆಯ್ತು, ಥಿಯೇಟರ್‌ಗಳ ಮುಂದೆ ಹೌಸ್‌ಫುಲ್ ಬೋರ್ಡ್ ಕೂಡ ಬಿದ್ದಾಯ್ತು… ಇದಕ್ಕಿಂತ ಇನ್ನೇನು ಬೇಕು..? ಹೌದು, ಸ್ಯಾಂಡಲ್‌ವುಡ್ ಸಿನಿಪ್ರಿಯರು ಮತ್ತು ಚಿತ್ರರಂಗದ ಮಂದಿ ಒಂದೂವರೆ ವರ್ಷದಿಂದ ಕಾಯುತ್ತಿದ್ದ ದಿನಗಳು ಮತ್ತೆ ಮರುಕಳಿಸುತ್ತಿವೆ.
ಸಿನಿಮಾ ಮಾಡಿ ಒಂದೂವರೆ ವರ್ಷದಿಂದ ಬಿಡುಗಡೆಗೆ ಹಿಂದೆ-ಮುಂದೆ ನೋಡುತ್ತಿದ್ದ ನೂರಾರು ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರ ಮುಖದಲ್ಲಿ ಸಣ್ಣ ನಗುವಿನ ಗೆರೆ ಮೂಡುತ್ತಿದೆ. ಇದೇ ವೇಳೆ ಈಗಾಗಲೇ ತಮ್ಮ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡಗಳು ತಮ್ಮ ರಿಲೀಸ್‌ಗೆ ತಯಾರಿ ಮಾಡಿಕೊಳ್ಳುತ್ತಿದ್ದು, ನಿಧಾನವಾಗಿ ಪ್ರಚಾರ ಕಾರ್ಯಗಳಿಗೂ ಚಾಲನೆ ಕೊಟ್ಟಿವೆ.
ಅದರಲ್ಲೂ ಅಕ್ಟೋಬರ್ ಮೊದಲ ವಾರದಿಂದ ಥಿಯೇಟರ್‌ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರ ಪ್ರವೇಶಾತಿ ಶುರುವಾದ ನಂತರ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದು ಸಹಜವಾಗಿಯೇ ಸಿನಿಮಂದಿಯ ಜೋಶ್ ಇನ್ನಷ್ಟು ಹೆಚ್ಚಿಸಿದೆ. ಇದರ ಪರಿಣಾಮವಾಗಿ ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆಗೆ ರೆಡಿಯಾಗಿರುವ ಸಾಲು ಸಾಲು ಸಿನಿಮಾಗಳು ತಮ್ಮ ಪ್ರಮೋಶನ್ಸ್ ಕೆಲಸಗಳಿಗೆ ಚಾಲನೆ ನೀಡಿವೆ. ಬ್ಯಾಕ್ ಟು ಬ್ಯಾಕ್ ಹೊಸ ಸಿನಿಮಾಗಳ ಫಸ್ಟ್‌ಲುಕ್, ಟೀಸರ್, ಸಾಂಗ್ಸ್, ಟ್ರೇಲರ್ ಬಿಡುಗಡೆಯಾಗುತ್ತಿದೆ. “ಭಜರಂಗಿ-2′, “ಸಖತ್’, “ತ್ರಿಬಲ್ ರೈಡಿಂಗ್’, “ಲವ್ ಯು ರಚ್ಚು’, “ಬಡವ ರಾಸ್ಕಲ್’, “ನಮ್ಮ ಹುಡುಗರು’, “ಕಡಲ ತೀರದ ಭಾರ್ಗವ’, “ರೈಡರ್’, “ನಮ್ಮೂರಿನ ರಸಿಕರು’, “ರಂಗ ಸಮುದ್ರ’, “ಅಮೃತ್ ಅಪಾರ್ಟ್‌ಮೆಂಟ್’, “ಟಾಮ್ ಅಂಡ್ ಜೆರ್ರಿ’, “ಮುಗಿಲ್ ಪೇಟೆ’ ಹೀಗೆ ಕಳೆದ ಎರಡು ವಾರಗಳಲ್ಲಿ ಕನ್ನಡದಲ್ಲಿ ನಲವತ್ತಕ್ಕೂ ಹೆಚ್ಚು ಸಿನಿಮಾಗಳ ಹೊಸ ಸಿನಿಮಾಗಳ ಫಸ್ಟ್‌ಲುಕ್, ಟೀಸರ್, ಸಾಂಗ್ಸ್, ಟ್ರೇಲರ್ ಬಿಡುಗಡೆಯಾಗಿರುವುದೇ ಇದಕ್ಕೆ ಸಾಕ್ಷಿ!
ಇದನ್ನೂ ಓದಿ:ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದ ಭಟ್ರು ಟೀಮ್ : ಶೀಘ್ರದಲ್ಲೇ ಬಾಕಿ ಸುದ್ದಿ
ಇದು ಬಿಡುಗಡೆಗೆ ರೆಡಿಯಾಗಿರುವ ಸಿನಿಮಾಗಳ ಚಟುವಟಿಕೆಗಳ ಕಥೆಯಾದರೆ, ಇನ್ನು ಕಳೆದ ಒಂದು ವರ್ಷದಿಂದ ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ಹಲವು ಸ್ಟಾರ್ ಮತ್ತು ಹೊಸಬರ ಸಿನಿಮಾಗಳು ಕೂಡ ಸದ್ದಿಲ್ಲದೆ ಸ್ಕ್ರಿಪ್ಟ್ ಪೂಜೆ, ಮುಹೂರ್ತ ನೆರವೇರಿಸಿಕೊಂಡು ಸೆಟ್ಟೇರುತ್ತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಕ್ರಾಂತಿ’, ಡಾರ್ಲಿಂಗ್ ಕೃಷ್ಣ ಅಭಿನಯದ “ಲವ್‌ಬರ್ಡ್ಸ್’ ಸೇರಿದಂತೆ ಕಳೆದ ಎರಡು ವಾರದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಹೊಸಬರ ಮತ್ತು ಸ್ಟಾರ್ ನಟರ ಸಿನಿಮಾಗಳು ಮುಹೂರ್ತವನ್ನು ಆಚರಿಸಿಕೊಂಡರೆ, ಹತ್ತಕ್ಕೂ ಹೆಚ್ಚು ಹೊಸ ಸಿನಿಮಾಗಳು ಅನೌನ್ಸ್ ಆಗಿವೆ. ಒಟ್ಟಾರೆ ನವರಾತ್ರಿ ಸಿನಿಮಾ ಮಂದಿಗೆ ಮತ್ತು ಸಿನಿಪ್ರಿಯರಿಗೆ ನವ ಭರವಸೆ ಕೊಟ್ಟಂತಿದ್ದು, ಈ ಸಿನಿಮಾಗಳು ಇದೇ ಪ್ರಮಾಣದಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆಯಾದರೆ, ಸ್ಯಾಂಡಲ್‌ವುಡ್ ಮತ್ತೆ ರಂಗುರಂಗಾಗಿ ಚಿತ್ರ ಕಳೆಕಟ್ಟುವುದರಲ್ಲಿ ಅನುಮಾನವಿಲ್ಲ.
ಜಿ.ಎಸ್.ಕಾರ್ತಿಕ ಸುಧನ್