ಹೈದರಾಬಾದ್: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬಾಲಕನೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ಮಂಚೇರಿಯಲ್ ನಲ್ಲಿ ನಡೆದಿದೆ.
ಸಿಎಚ್ ಸಚಿನ್ (16) ಮೃತ ಬಾಲಕ.
ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಬೇಕೆಂದಿದ್ದ ಸಚಿನ್ ಗಾಗಿ ಆತನ ಸ್ನೇಹಿತರು ಮನೆಯವರು ತಯಾರಿಯನ್ನು ಮಾಡಿಕೊಂಡಿದ್ದರು. ಗ್ರಾಮದಲ್ಲಿ ಆತನ ಸ್ನೇಹಿತರು ಹುಟ್ಟುಹಬ್ಬಕ್ಕಾಗಿ ಪೋಸ್ಟರ್, ಫೋಟೋಗನ್ನು ಹಾಕಿದ್ದರು. ತನ್ನ ಹುಟ್ಟುಹಬ್ಬಕ್ಕಾಗಿ ಎಲ್ಲರನ್ನು ಆಹ್ವಾನ ನೀಡಿ ಅದೇ ಖುಷಿಯಲ್ಲಿ ಆಸಿಫಾಬಾದ್ ಪಟ್ಟಣದಲ್ಲಿ ಶಾಪಿಂಗ್ ಗೆಂದು ಸಚಿನ್ ತೆರಳಿದ್ದಾರೆ.
ಶಾಪಿಂಗ್ ಮಾಡುವ ವೇಳೆ ಸಚಿನ್ ಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು, ಅಲ್ಲೇ ಆತ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟ ಪರಿಣಾಮ ಆತನನ್ನು ಮಂಚೇರಿಯಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಆತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮಗನನ್ನು ಕಳೆದುಕೊಂಡ ಪೋಷಕರು, ಸ್ನೇಹಿತರಿಗೆ ಇದು ದೊಡ್ಡ ಆಘಾತವನ್ನೇ ನೀಡಿದೆ. ಮಗನ ಹುಟ್ಟುಹಬ್ಬಕ್ಕಾಗಿ ತಯಾರಾಗಿದ್ದ ಮನೆಯಲ್ಲಿ ಅದೇ ದಿನ ಆತನ ಮೃತದೇಹವನ್ನು ತಂದು ದುಃಖಿಸುವ ಸ್ಥಿತಿ ನಿರ್ಮಾಣವಾಗಿದೆ.
ಕೇಕ್ ಕತ್ತರಿಸಬೇಕಿದ್ದ ಮಗನ ಆಸೆಯನ್ನು ತಂದೆ – ತಾಯಿ ಗ್ರಾಮಸ್ಥರು ನೆರವೇರಿಸಿದ್ದಾರೆ. ಮೃತದೇಹದ ಕೈಗೆ ಕೇಕ್ ಕತ್ತರಿಸುವ ಚಾಕುವನ್ನು ಕೊಟ್ಟು, ಅತ್ತ ಆಳುತ್ತಾ, ಇತ್ತ ಚಪ್ಪಾಳೆಯನ್ನೂ ಬಡಿಯುತ್ತ ಮೃತದೇಹದ ಕೈಯನ್ನು ಹಿಡಿದು ಮಗನ ಹುಟ್ಟುಹಬ್ಬವನ್ನು ಮನೆಯವರು ಆಚರಿಸಿದ್ದಾರೆ. ಆ ಮೂಲಕ ಮಗನ ಆ ದಿನದ ಆಸೆಯನ್ನು ನೆರವೇರಿಸಿದ್ದಾರೆ.
ಈ ಕರುಣಾಜನಕ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾವ ಕಾರಣದಿಂದ ಈ ಹೃದಯಾಘಾತ ಸಂಭವಿಸಿದೆ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ.