ಢಾಕಾ: ಬಾಂಗ್ಲಾದೇಶದ ಗೋಪಿಬಾಗ್ ನಲ್ಲಿ ಬೇನಾಪೋಲ್ ಎಕ್ಸ್ ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದ್ದು, ನಾಲ್ವರು ಪ್ರಯಾಣಿಕರು ಸಾವಿಗೀಡಾಗಿರುವುದಾಗಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಇದನ್ನೂ ಓದಿ:Namma metro: ಆತ್ಮಹತ್ಯೆಗೆ ಮೆಟ್ರೋ ಹಳಿಗೆ ಜಿಗಿದ ಯುವಕ
ದುಷ್ಕರ್ಮಿಗಳು ಹಚ್ಚಿದ ಬೆಂಕಿಯಿಂದಾಗಿ ಐದು ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಸಾವನ್ನಪ್ಪಿದ ಪ್ರಯಾಣಿಕರ ಗುರುತು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ ಎಂದು ವರದಿ ತಿಳಿಸಿದೆ.
ಘಟನಾ ಸ್ಥಳಕ್ಕೆ ಏಳು ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಬೇನಾಪೋಲ್ ಎಕ್ಸ್ ಪ್ರೆಸ್ ರೈಲು ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಲಾಗಿದೆ ಎಂದು ಢಾಕಾ ಮೆಟ್ರೊಪೊಲಿಟಿಯನ್ ಪೊಲೀಸ್ ಕಮಿಷನರ್ ಮಹಿದ್ ಉದ್ದೀನ್ ಆರೋಪಿಸಿದ್ದಾರೆ.
ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆ ನಡೆಯಲು ಎರಡು ದಿನಗಳು ಬಾಕಿ ಇರುವಾಗಲೇ ಈ ಘಟನೆ ನಡೆದಿದೆ. ಈ ದಾಳಿಯನ್ನು ಯಾರು ಮಾಡಿದ್ದಾರೆಂಬುದು ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಇದರ ಹಿಂದೆ ಪಿತೂರಿ ಇದೆ ಎಂದು ಮಹಿದ್ ಉದ್ದೀನ್ ತಿಳಿಸಿದ್ದಾರೆ.
ಈ ದುಷ್ಕೃತ್ಯವನ್ನು ಯಾರೇ ಎಸಗಲಿ ಅವರನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂತಹ ಕೃತ್ಯದಿಂದ ಜನಸಾಮಾನ್ಯರು, ಮಕ್ಕಳು, ಮಹಿಳೆಯರು ತೊಂದರೆಗೆ ಒಳಗಾಗುತ್ತಾರೆ ಎಂದು ಮಹಿದ್ ಉದ್ದೀನ್ ತಿಳಿಸಿರುವುದಾಗಿ ವರದಿಯಾಗಿದೆ.