ಕಲಬುರಗಿ: ಹಲವು ಕುಟುಂಬಗಳಲ್ಲಿ ಕೋವಿಡ್ ಮಹಾಮಾರಿ ಸೋಂಕು ಕಣ್ಣೀರಿನ ಹೊಳೆಯನ್ನೇ ಹರಿಸುವಂತೆ ಮಾಡುತ್ತಿದ್ದು, ತನಗೆ ಮಗು ಹುಟ್ಟಿದ ಎರಡನೇ ದಿನಕ್ಕೆ ಸೋಂಕಿನಿಂದ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಅಫಜಲಪುರ ತಾಲೂಕಿನಲ್ಲಿ ನಡೆದಿದೆ.
32 ವರ್ಷದ ಸುಭಾಷ್ ತಾವರಖೇಡ ಎಂಬಾತನೇ ಕೋವಿಡ್ ಗೆ ಬಲಿಯಾದ ತಂದೆ. ಕೋವಿಡ್ ಸೋಂಕು ಕಾಣಿಸಿಕೊಂಡ ಪರಿಣಾಮ ಸುಭಾಷ್ ಕಳೆದ15 ದಿನಗಳಿಂದ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇತ್ತ, ತುಂಬು ಗರ್ಭಿಣಿಯಾಗಿದ್ದ ಈತನ ಪತ್ನಿ ಸರಸ್ವತಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಬುಧವಾರ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಇದನ್ನೂ ಓದಿ : ಸುಶೀಲ್ ಕುಮಾರ್ ಬಂಧನ ಊಹಾಪೋಹ: ಅಧಿಕೃತ ಮಾಹಿತಿ ನೀಡಿದ ದೆಹಲಿ ಪೊಲೀಸರು
ಆದರೆ, ಮಗು ಜನಿಸಿದ ಎರಡನೇ ದಿನಗಳ ನಂತರ ಅಂದರೆ ಶುಕ್ರವಾರ ಸುಭಾಷ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ.
ಸುಭಾಷ್ ಮತ್ತು ಸರಸ್ವತಿ ದಂಪತಿಗೆ ಇದು ಚೊಚ್ಚಲ ಮಗುವಾಗಿದೆ. ಪುಟ್ಟ ಮಗುವನ್ನು ಮುದ್ದಾಡುತ್ತಾ, ಸಂತಸದಲ್ಲಿರಬೇಕಿದ್ದ ತಂದೆ ಕೋವಿಡ್ ಗೆ ಬಲಿಯಾಗಿರುವುದು ದುರಂತವೇ ಸರಿ.