Advertisement

ಪತಿ, ಕುಟುಂಬದವರ ಕಿರುಕುಳ: ಶಿಕ್ಷಕಿ ಆತ್ಮಹತ್ಯೆ

11:31 AM Oct 24, 2022 | Team Udayavani |

ಬೆಂಗಳೂರು: ಪತಿ ಮತ್ತು ಆತನ ಕುಟುಂಬ ಸದಸ್ಯರ ಕಿರುಕುಳ ಹಾಗೂ ದೌರ್ಜನ್ಯಕ್ಕೆ ಬೇಸತ್ತು ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ತಿಪ್ಪಾರೆಡ್ಡಿ ಲೇಔಟ್‌ ನಿವಾಸಿ ನಿಹಾರಿಕಾ(26) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಘಟನೆ ಕುರಿತು ಮೃತರ ಪೋಷಕರು ನೀಡಿದ ದೂರಿನ ಮೇರೆಗೆ ಪುಟ್ಟೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಿಹಾರಿಕಾ ಪತಿ ಕಾರ್ತಿಕ್‌(32) ಎಂಬಾತನನ್ನು ಬಂಧಿಸಿದ್ದಾರೆ.

ಮೈಸೂರು ಮೂಲದ ನಿಹಾರಿಕಾ, ಬೆಂಗಳೂರಿನಲ್ಲಿ ಎಂಜಿನಿಯರ್‌ ಆಗಿದ್ದ ಕಾರ್ತಿಕ್‌ನನ್ನು ಪ್ರೀತಿಸುತ್ತಿದ್ದರು. ಈ ವಿಚಾರ ಹಿರಿಯರಿಗೆ ತಿಳಿಸಿ, ಬಳಿಕ ಎರಡು ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ನಂತರ ನಿಹಾರಿಕಾ ಪುಟ್ಟೇನಹಳ್ಳಿಯಲ್ಲಿಯೇ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದರು. ಕಾರ್ತಿಕ್‌ ಕುಟುಂಬ ಪುಟ್ಟೇನಹಳ್ಳಿಯಲ್ಲಿನ ತಿಪ್ಪಾರೆಡ್ಡಿ ಲೇಔಟ್‌ನಲ್ಲಿರುವ ಎಲಿಗೆಂಟ್‌ ಪ್ಯಾಲೇಸ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ನಲ್ಲಿ ವಾಸವಾಗಿತ್ತು. ಮದುವೆಯ ನಂತರ ನಿಹಾರಿಕಾ ಕೂಡ ಪತಿ ಜತೆ ಇಲ್ಲಿಯೇ ವಾಸವಾಗಿದ್ದರು.

ಕೆಲ ದಿನಗಳ ನಂತರ ಕಾರ್ತಿಕ್‌ ಕುಟುಂಬ ಸದಸ್ಯರು, ಆಕೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಆರಂಭಿಸಿದ್ದಾರೆ. ಅದರಿಂದ ನೊಂದಿದ್ದ ಆಕೆ, ತನ್ನ ಪೋಷಕರಿಗೆ ತಿಳಿಸಿದ್ದರು. ಬಳಿಕ ಆಕೆಯ ತಂದೆ, ಅಳಿಯ ಕಾರ್ತಿಕ್‌ ಕುಟುಂಬ ಸದಸ್ಯರಿಗೆ ಪುತ್ರಿಗೆ ತೊಂದರೆ ಕೊಡದಂತೆ ಮನವಿ ಮಾಡಿದ್ದರು. ಆದರೂ ಆರೋಪಿಗಳು ಕಿರುಕುಳ ನೀಡುತ್ತಿದ್ದರು. ಹೀಗಾಗಿ ಆಕೆ ಮನೆ ಬಿಟ್ಟು ತವರು ಮನೆಗೆ ಹೋಗಿದ್ದರು. ಅದರಿಂದ ವಿಚಲಿತನಾದ ಕಾರ್ತಿಕ್‌, ಪತ್ನಿಗೆ ಕರೆ ಮಾಡಿ ಮನೆಗೆ ವಾಪಸ್‌ ಬರುವಂತೆ ಕೇಳಿಕೊಂಡಿದ್ದ. ಅಲ್ಲದೆ, ಆತನೇ ಸಂಬಂಧಿ ಮನೆಯಲ್ಲಿದ್ದ ಪತ್ನಿಯನ್ನು 20 ದಿನಗಳ ಹಿಂದಷ್ಟೇ ಮನೆಗೆ ವಾಪಸ್‌ ಕರೆತಂದಿದ್ದ. ಅನಂತರವೂ ಕಾರ್ತಿಕ್‌ ಮನೆಯವರು ಆಕೆಗೆ ತೊಂದರೆ ಕೊಡುತ್ತಿದ್ದರು ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಕಿರುಕುಳಕ್ಕೆ ಶಿಕ್ಷಕಿ ನೇಣಿಗೆ ಶರಣಾಗಿದ್ದಾರೆ. ಕೆಲ ಹೊತ್ತಿನ ಬಳಿಕ ಕಾರ್ತಿಕ್‌ ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಅಲ್ಲದೆ, ಮೃತಳ ಚಿಕ್ಕಪ್ಪನ ಪುತ್ರಿ ಕಾರ್ತಿಕ್‌ಗೆ ಕರೆ ಮಾಡಿ, ನಿಹಾರಿಕಾ ಬಗ್ಗೆ ಕೇಳಿದಾಗ, ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾನೆ. ಈ ಸಂಬಂಧ ನಿಹಾರಿಕಾ ಪೋಷಕರು, ಅಳಿಯ ಕಾರ್ತಿಕ್‌ ವಿರುದ್ಧ ದೂರು ನೀಡಿದ್ದರು. ಕಾರ್ತಿಕ್‌ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಕಾರ್ತಿಕ್‌ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ನೇಣಿಗೆ ಶರಣು: ಈ ಮಧ್ಯೆ ಪತಿ, ಪತ್ನಿ ನಡುವೆ ವಿರಸ ಉಂಟಾಗಿತ್ತು. ಶನಿವಾರ ಶಾಲೆಯಲ್ಲಿ ಕಾರ್ಯಕ್ರಮವಿದೆ ಹೋಗಬೇಕೆಂದು, ಪತಿ ಬಳಿ ಅನುಮತಿ ಕೇಳಿದ್ದಾರೆ. ಆದರೆ, ಆರೋಪಿ ಕಾರ್ತಿಕ್‌ ಅನುಮತಿ ನಿರಾಕರಿಸಿದ್ದು, ಅಲ್ಲದೆ, ಆತನ ಕುಟುಂಬ ಸದಸ್ಯರು ಕೂಡ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅದರಿಂದ ಭಾವುಕಳಾದ ನಿಹಾರಿಕಾ, ಘಟನೆಯನ್ನು ಚಿಕ್ಕಪ್ಪನಿಗೆ ವಿವರಿಸಿ ಕೋಣೆಯೊಳಗೆ ಹೋಗಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next