ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಗುಂಡದ ಬಸ್ತಿ ತಿರುವು ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್‌ನಡಿ ಸಿಲುಕಿದ ಹಿರೆಬಂಡಾಡಿಯ ಸಹೋದರರಿಬ್ಬರು ಮೃತಪಟ್ಟ ಘಟನೆ ಮಾ.18ರಂದು ಸಂಜೆ 4.15ರ ಸುಮಾರಿಗೆ ಸಂಭವಿಸಿದೆ.
ಉಪ್ಪಿನಂಗಡಿ ಸಮೀಪದ ಹಿರೆಬಂಡಾಡಿ ನಿವಾಸಿ, ನಿವೃತ್ತ ಶಿಕ್ಷಕ ದಿ| ಮರ್ಹೂಮ್ ಅಬ್ದುಲ್ ರಝಾಕ್ ಅವರ ಪುತ್ರರಾದ ಹಮ್ಮಬ್ಬ ಸಿರಾಜ್(30) ಮತ್ತು ಕುತುಬುದ್ದೀನ್ ಸಾದಿಕ್(33) ಮೃತಪಟ್ಟವರು. ಬಸ್ ಚಾಲಕ ವಿಶ್ವನಾಥ (53) ವಿರುದ್ಧ ದೂರು ದಾಖಲಾಗಿದೆ.
ಗುರುವಾರವಷ್ಟೇ ವೇಣೂರಿನ ಅಂಗರಕರಿಯ ಎಂಬಲ್ಲಿ ಸಹೋದರಿಯ ಪತಿ (ಬಾವ) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಮೃತಪಟ್ಟ ಬಾವನ ಮನೆಗೆ ಹೋಗಿ ವಾಪಸಾಗುತ್ತಿದ್ದಾಗ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್‌ಗೆ ಢಿಕ್ಕಿಯಾಗಿದೆ. ಪರಿಣಾಮ ಸವಾರರಿಬ್ಬರು ಬಸ್‌ನಡಿ ಸಿಲುಕಿದ್ದು, ಬಸ್ ಎಡಭಾಗದಿಂದ ಬಲಬಾಗದ ರಸ್ತೆ ಮಾರ್ಜಿನ್ ದಾಟಿ ಎಳೆದೊಯ್ದಿದೆ. ಅಪಘಾತದ ರಭಸಕ್ಕೆ ಕುತುಬುದ್ದೀನ್ ಸಾದಿಕ್ ಮತ್ತು ಹಮ್ಮಬ್ಬ ಸಿರಾಜ್ ಅವರ ತಲೆಗೆ, ಕೈಕಾಲುಗಳಿಗೆ ತೀವ್ರ ಗಾಯಗಳಾಗಿತ್ತು. ಅಪಘಾತ ದಿಂದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮತ್ತೋರ್ವನನ್ನು ಸ್ಥಳೀಯ ಗೋಳಿಯಂಗಡಿಯ ಮುನೀರ್, ಲತೀಫ್ ಮೊದಲಾದವರು ಆಸ್ಪತ್ರೆಗೆ ಕರೆತಂದರೂ ದಾರಿ ಮಧ್ಯ ಮೃತಪಟ್ಟಿದ್ದರು. ಸಿರಾಜ್ ಮತ್ತು ಸಾದಿಕ್ ವಿದೇಶದಲ್ಲಿ ಉದ್ಯೋಗಸ್ಥರಾಗಿದ್ದರು. ಐದು ತಿಂಗಳ ಹಿಂದೆ ಊರಿಗೆ ಮರಳಿದ್ದರು. ಮೃತರು ತಾಯಿ, 6 ಮಂದಿ ಸಹೋದರಿಯರು ಹಾಗೂ 8 ಮಂದಿ ಸಹೋದರರನ್ನು ಅಗಲಿದ್ದಾರೆ.
ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.