ಬೆಳಗಾವಿ: ರೈಲು ಹಳಿಗೆ ತಲೆ ಕೊಟ್ಟು ಮೂವರು ಆತ್ಮಹತ್ಯೆ ಮಾಡಿಕೊಂಡ ಪ್ರತ್ಯೇಕ ಪ್ರಕರಣಗಳು ಬೆಳಗಾವಿಯಲ್ಲಿ ನಡೆದಿದ್ದು, ಒಬ್ಬನ ಗುರುತು ಪತ್ತೆ ಆಗಿದೆ. ಇನ್ನೂ ಇಬ್ಬರು ಅಪರಿಚಿತರಾಗಿದ್ದಾರೆ.
ಪಾಶ್ಚಾಪುರ-ಸುಲಧಾಳ ಮಾರ್ಗ ಮಧ್ಯೆ ರೈಲು ಹಳಿಗೆ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಡಿತದ ಚಟಕ್ಕೆ ದಾಸನಾಗಿದ್ದ ಅಂಕಲಗಿ ಗ್ರಾಮದ ಅಶೋಕ ಈರಪ್ಪ ಕಟ್ಟಿಮನಿ(46) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗಾವಿ ನಗರದ ಸಮರ್ಥ ನಗರದ ರೈಲ್ವೆ ಮಾರ್ಗದಲ್ಲಿ 60 ವರ್ಷದ ಅಪರಿಚಿತ ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವ್ಯಕ್ತಿ ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು. ಎತ್ತರ 5.4 ಅಡಿ, ಬೋಳು ತಲೆ, ವ್ಯಕ್ತಿ ಬಿಳಿ ಬಣ್ಣದ ಪುಲ್ ಶರ್ಟ್, ಗ್ರೇ ಕಲರ್ ಲೋಯರ್ ಪ್ಯಾಂಟ್, ಮೇಹಂದಿ ಕಲರ್ ನಿಕ್ಕರ್ ಧರಿಸಿರುತ್ತಾನೆ.
ಇದನ್ನೂ ಓದಿ: ತಲೆ ಮೇಲೆ ತೆಂಗಿನಕಾಯಿ ಬಿದ್ದು ಮಗು ಸಾವು
ಇನ್ನೊಂದೆಡೆ ಚಿಕ್ಕೋಡಿ ರೋಡ್ ನ ರೈಲು ನಿಲ್ದಾಣದ ಹತ್ತಿರ ಅಂದಾಜು 55 ವರ್ಷದ ಅಪರಿಚಿತ ವ್ಯಕ್ತಿಯೊರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎತ್ತರ 5.5 ಅಡಿ ಗೋಧಿ ಮೈಬಣ್ಣ, ಸದೃಢ ಮೈಕಟ್ಟು, ಬಿಳಿ ಮತ್ತು ಕಪ್ಪು ಮಿಶ್ರಿತ ತಲೆ ಕೂದಲು ಹಾಗೂ ಸಣ್ಣಗೆ ದಾಡಿ, ಮೀಸೆ ಬಿಟ್ಟಿರುತ್ತಾನೆ. ವ್ಯಕ್ತಿ ಬಿಳಿ ಬಣ್ಣದ ಪುಲ್ ಶರ್ಟ್, ನೀಲಿ ಬಣ್ಣದ ಹಾಪ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಬೂಟು ಧರಿಸಿರುತ್ತಾನೆ.
ಈ ಇಬ್ಬರು ಅಪರಿಚಿತರ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆ ದೂ: 0831-2405273 ಗೆ ಸಂಪರ್ಕಿಸಬೇಕು. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.