ಕೋಲಾರ: ಕೆರೆಯಲ್ಲಿ ತೆಪ್ಪ ಮಗುಚಿಕೊಂಡ ಪರಿಣಾಮ ಮೂವರು ಸ್ನೇಹಿತರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನೇರಳೆಕೆರೆಯಲ್ಲಿ ಬುಧವಾರ ಜರುಗಿದೆ.
ಮೃತರನ್ನು ಚಿಕ್ಕವಲಗಮಾದಿಯ ನವೀನ್(32), ನೇರಳೆಕೆರೆಯ ರಾಜೇಂದ್ರ (32), ಮೋಹನ್ (28) ಎಂದು ಗುರುತಿಸಲಾಗಿದೆ. ಇವರಿಗೆ ಊಟ ತರಲು ತೆರಳಿದ್ದ ಶಿವರಾಜ್ ಎಂಬ ಯುವಕ ಜೀವಂತವಾಗಿ ಉಳಿದುಕೊಂಡಿದ್ದಾನೆ.
ಬುಧವಾರ ಬೆಳಿಗ್ಗೆ ರೈಲಿನಲ್ಲಿ ಕೆಲಸಕ್ಕೆ ತೆರಳಬೇಕಾಗಿದ್ದ ಈ ಯುವಕರು ರೈಲು ತಡವಾಗಿದ್ದರಿಂದ ವಾಪಸ್ ಆಗಿ ಕೆರೆ ಬಳಿ ಪಾರ್ಟಿ ಮಾಡಲು ಮುಂದಾಗಿದ್ದಾರೆ. ಕೆರೆ ಬಳಿ ಪಾರ್ಟಿ ಮಾಡಿ ತೆಪ್ಪದಲ್ಲಿ ಹೋದಾಗ ಈ ದುರ್ಘಟನೆ ಜರುಗಿದೆ.
ತೆಪ್ಪವು ಕೆರೆ ಮಧ್ಯೆ ಹೋಗಿದ್ದಾಗ ಮುಳಗಲು ಆರಂಭಿಸಿದೆ. ಆಗ ಯುವಕರ ಕೂಗಾಟ ಕೇಳಿಸಿಕೊಂಡ ಸ್ಥಳೀಯರು ಮೂವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ತೆಪ್ಪವು ಕೆರೆ ಮಧ್ಯಕ್ಕೆ ಹೋಗಿದ್ದರಿಂದ ಮೂವರನ್ನು ರಕ್ಷಿಸಲು ತಕ್ಷಣಕ್ಕೆ ಸಾಧ್ಯವಾಗಿಲ್ಲ.
ಸದ್ಯ ಮೂವರು ಶವಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ನಡೆದಿದೆ.
ನೂರಾರು ಮಂದಿ ಸ್ಥಳೀಯರು ಕೆರೆ ಸುತ್ತಲೂ ಜಮಾಯಿಸಿದ್ದಾರೆ.
ಸ್ಥಳಕ್ಕೆ ಕೆಜಿಎ- ಪೊಲೀಸ್ ರಕ್ಷಣಾಧಿಕಾರಿ ಡಿ.ಕೆ.ಧರಣಿದೇವಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಬಂಗಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.