ಮುದ್ದೇಬಿಹಾಳ: ಎಮ್ಮೆಗೆ ನೀರು ಕುಡಿಸಲು ಹೋದ ವೇಳೆ ಕಾಲು ಜಾರಿ ಹೊಂಡದಲ್ಲಿ ಬಿದ್ದ ಬಾಲಕಿಯನ್ನು ರಕ್ಷಿಸಲು ಹೋಗಿ ಮೂವರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಹಡಲಗೇರಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮೃತರನ್ನು ಹಡಲಗೇರಿಯ ನೀಲಮ್ಮ ಹುಲಗಪ್ಪ ಕಿಲಾರಹಿಟ್ಟಿ (16), ಲಡ್ಡುಮುತ್ಯಾ ಮಹಾನಿಂಗಪ್ಪ ಕಿಲಾರಹಟ್ಟಿ (25) ಮತ್ತು ಯಲ್ಲಪ್ಪ ಶಿವಪ್ಪ ಯಾಳವಾರ (30) ಎಂದು ಗುರುತಿಸಲಾಗಿದೆ.
ನೀಲಮ್ಮ ಎಂದಿನಂತೆ ಎಮ್ಮೆಗಳನ್ನು ಹೊಡೆದುಕೊಂಡು ನೀರು ಕುಡಿಸಲೆಂದು ಹೊಂಡಕ್ಕೆ ತೆರಳಿದ್ದಳು. ಆಗ ಏಕಾಏಕಿ ಕಾಲು ಜಾರಿ ಹೊಂಡದಲ್ಲಿ ಬಿದ್ದಿದ್ದಾಳೆ. ಅಲ್ಲಿಯೇ ದನ ಮೇಯಿಸುತ್ತಿದ್ದ ನೀಲಮ್ಮಳ ಸೋದರ ಸಂಬಂ ಧಿ ಲಡ್ಡುಮುತ್ಯಾ ಮತ್ತು ಯಲ್ಲಪ್ಪ ಇಬ್ಬರೂ ಆಕೆಯನ್ನು ರಕ್ಷಿಸಲು ಹೊಂಡಕ್ಕೆ ಧುಮುಕಿದ್ದಾರೆ.
ಆದರೆ ಮೇಲೆ ಬರಲಾಗದೆ ಹೊಂಡದಲ್ಲೇ ಮುಳುಗಿ ಉಸಿರುಗಟ್ಟಿ ಮೂವರೂ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಕಿಲಾರಹಟ್ಟಿ ಕುಟುಂಬದವರೂ ಸೇರಿದಂತೆ ಇಡೀ ಗ್ರಾಮದ ಜನತೆ ಹೊಂಡದ ಬಳಿ ಜಮಾಯಿಸಿದರು. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಧಾವಿಸಿ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದೊಂದಿಗೆ ಮೂವರ ಶವಗಳನ್ನು ಹೊಂಡದಿಂದ ಮೇಲೆ ತಂದರು.
ಮೃತ ಕುಟುಂಬದವರು, ಬಂಧುಗಳ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈ ಸಂಜಯ್ ತಿಪ್ಪರಡ್ಡಿ ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದಾರೆ.ಬಸವನ ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಅವರೂ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.