ಕಾರವಾರ: ಕ್ರೀಡಾಕೂಟ ನಡೆಯುವ ವೇಳೆ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಗೋಪಿಶಿಟ್ಟಾ ವಲಯದ ಉಪವಲಯ ಅರಣ್ಯಾಧಿಕಾರಿಯಾಗಿದ್ದ ಸಿಕಂದರ್ .ಐ. ಜಮಾಧಾರ್ ಸೋಮವಾರ ಸಾವನ್ನಪ್ಪಿದ್ದಾರೆ.
ಮೂಲತ ಜಿಲ್ಲೆಯ ಹಳಿಯಾಳ ತಾಲೂಕಿನವರಾಗಿದ್ದ ಸಿಕಂದರ್ ಹಲವು ವರ್ಷಗಳಿಂದ ಕಾರವಾರ ತಾಲೂಕಿನಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆಯನ್ನ ಸಲ್ಲಿಸುತ್ತಾ ಬಂದಿದ್ದರು. ಕಾರವಾರ ತಾಲೂಕಿನಲ್ಲಿ ಉತ್ತಮ ಹೆಸರನ್ನ ಸಹ ಗಳಿಸಿದ್ದು ಎಲ್ಲರೊಂದಿಗೂ ಸೌಮ್ಯ ಸ್ವಭಾವದಿಂದ ನಡೆದುಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದರು.
ಕ್ರೀಡಾಪಟುವಾಗಿದ್ದ ಸಿಕಂದರ್ ಕೆನರಾ ಅರಣ್ಯ ವಲಯ ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ಗೆದ್ದು ರಾಜ್ಯ ಮಟ್ಟದ ಅರಣ್ಯ ಇಲಾಖೆಯ ಸಿಬಂದಿಗಳ ಕ್ರೀಡಾಕೂಟ ಕಲಬುರ್ಗಿಯಲ್ಲಿ ಆಯೋಜನೆ ಮಾಡಿದ್ದು ಅದರಲ್ಲಿ ಪಾಲ್ಗೊಂಡಿದ್ದರು.
ಕ್ರೀಡಾಕೂಟದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವೇಳೆಯಲ್ಲಿ ಸಿಕಂದರ್ ಜನವರಿ 5 ರಂದು ಹಠಾತ್ ಕುಸಿದು ಬಿದ್ದಿದ್ದರು. ತತ್ ಕ್ಷಣ ಇತರೇ ಸಿಬಂದಿಗಳು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದು ವೈದ್ಯರು ಚಿಕಿತ್ಸೆ ನೀಡಿದ್ದು ಚೇತರಿಸಿಕೊಂಡಿದ್ದರು. ಅದರೇ ಕೆಲವೇ ಸಮಯದಲ್ಲಿ ಬ್ರೈನ್ ಸ್ಟ್ರೋಕ್ ಆಗಿದ್ದು ಇದರಿಂದ ಕೋಮಾಕ್ಕೆ ಸಿಕಂದರ್ ಹೋಗಿದ್ದರು.
ಸೋಮವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಿಕಂದರ್ ಮೃತಪಟ್ಟಿದ್ದಾರೆ. ಸಿಕಂದರ್ ಅವರ ಸಾವಿಗೆ ಕೆನರಾ ಅರಣ್ಯ ವಲಯದ ಹಿರಿಯ ಅಧಿಕಾರಿಗಳು, ಸಿಬಂದಿ ವರ್ಗದವರು, ಕಾರವಾರ ತಾಲೂಕಿನ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.