ಜಮ್ಮು-ಕಾಶ್ಮೀರ: 75ನೇ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ದಿನಗಣನೆ ಬೆನ್ನಲ್ಲೇ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಬುಧವಾರ (ಆಗಸ್ಟ್ 10) ಬರೋಬ್ಬರಿ 25 ಕೆಜಿಯಷ್ಟು ಸುಧಾರಿತ ಸ್ಫೋಟಕವನ್ನು ನಿಷ್ಕ್ರಿಯಗೊಳಿಸುವ ಮೂಲಕ ಭದ್ರತಾ ಪಡೆಗಳು ಭಾರೀ ಅನಾಹುತವನ್ನು ತಪ್ಪಿಸಿದಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮೈಸೂರು ದಸರಾಕ್ಕೆ ಮುನ್ನುಡಿ : ಸಾಂಪ್ರದಾಯಿಕ ಪೂಜೆ ಮೂಲಕ ಅರಮನೆ ಪ್ರವೇಶಿಸಿದ ಗಜಪಡೆ
ಪುಲ್ವಾಮಾದ ತಹಾಬ್ ಕ್ರಾಸಿಂಗ್ ಬಳಿ 25ರಿಂದ 30 ಕೆಜಿ ತೂಕದ ಸುಧಾರಿತ ಸ್ಫೋಟಕ(ಐಇಡಿ)ವನ್ನು ಭದ್ರತಾಪಡೆ ಮತ್ತು ಪುಲ್ವಾಮಾ ಪೊಲೀಸರು ವಶಪಡಿಸಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಐಇಡಿಯನ್ನು ವಶಕ್ಕೆ ತೆಗೆದುಕೊಂಡು ನಿಷ್ಕ್ರಿಯಗೊಳಿಸಿದ್ದು, ಇದರಿಂದ ಭಾರೀ ಸಂಚನ್ನು ವಿಫಲಗೊಳಿಸಿದಂತಾಗಿದೆ.
ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿದ್ದು, 30 ಕೆಜಿಯಷ್ಟು ತೂಕದ ಐಇಡಿಯನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಯ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಐಇಡಿಯನ್ನು ನಿಷ್ಕ್ರಿಯಗೊಳಿಸುವವರೆಗೆ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಕಳೆದ ಕೆಲವು ವರ್ಷಗಳಿಂದ ಉಗ್ರರು ದಾಳಿ ನಡೆಸಲು ಐಇಡಿಯನ್ನು ಬಳಸುತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಐಇಡಿ ತಜ್ಞರು ಗಡಿಪ್ರದೇಶದಿಂದ ಒಳನುಸುಳಿ ಕಾಶ್ಮೀರದೊಳಗೆ ಪ್ರವೇಶಿಸಿ ಉಗ್ರರ ಜೊತೆ ಕೈಜೋಡಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.