ಔರಾದ: ಅಂಗನವಾಡಿಯಲ್ಲಿ ಮಕ್ಕಳಿಗೆ ಪೂರೈಸುವ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವಾಗ ತಾಲೂಕಿನ ಎಕಂಬಾ ಗ್ರಾಮದಲ್ಲಿ ಕನ್ನಡ ಸಮರ ಸೇನೆ ಜಿಲ್ಲಾಧ್ಯಕ್ಷ ಅವಿನಾಶ ದೀನೆ ಸೇರಿ ಇತರೆ ಸಂಘಟನೆಯ ಮುಖಂಡರು ವಾಹನ ತಡೆದು ಔರಾದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಶಂಭುಲಿಂಗ ಹಿರೇಮಠ ಹಾಗೂ ಸಿಬ್ಬಂದಿ ಅಕ್ರಮವಾಗಿ ಮಾರಾಟ ಮಾಡುವ ದಂಧೆ ಎರಡ್ಮೂರು ತಿಂಗಳಿಗೊಮ್ಮೆ ಮಾಡುತ್ತಿದ್ದಾರೆಂದು ಸಾರ್ವಜನಿಕರು ಹಲವು ಬಾರಿ ತಿಳಿಸಿದ್ದರು. ಅಲ್ಲದೇ ತಾಲೂಕಿನ ಬಹುತೇಕ ಅಂಗನವಾಡಿಯಲ್ಲಿನ ಮಕ್ಕಳಿಗೆ ನಿತ್ಯ ಪೌಷ್ಟಿಕಾಂಶದ ಆಹಾರ ಪದಾರ್ಥಗಳು ಸಿಗುತ್ತಿಲ್ಲವೆಂದು ದೂರುಗಳು ಬಂದಿದ್ದವು. ಹೀಗಾಗಿ ಇಂದು ನಮ್ಮ ಸಂಘಟನೆ ಸದಸ್ಯರು ಸೇರಿ ವಾಹನದ ಬೆನ್ನತ್ತಿ ಮಾರಾಟ ಮಾಡುತ್ತಿರುವುದನ್ನು ಕಂಡು ಔರಾದ ಪೊಲೀಸ್ ಠಾಣೆಗೆ ತಿಳಿಸಿ ವಾಹನ ಠಾಣೆಗೆ ತರಲಾಗಿದೆ ಎಂದರು.
ಶಿಶು ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿಗೆ ಆಹಾರ ಸಾಮಗ್ರಿ ಸರಬರಾಜು ಮಾಡುವ ವಾಹನಗಳಿಗೆ ಜಿಪಿಎಸ್ ಯಂತ್ರ ಅಳವಡಿಸಲಾಗುತ್ತದೆ ಮತ್ತು ವಾಹನದಲ್ಲಿ ಇಲಾಖೆ ಸಿಬ್ಬಂದಿಗಳೂ ಇರುತ್ತಾರೆ. ಆದರೆ ಎಕಂಬಾ ಗ್ರಾಮದಿಂದ ಮಹಾರಾಷ್ಟ್ರಕ್ಕೆ ಹೋಗುವ ವಾಹನದಲ್ಲಿ ಓರ್ವ ಸಿಬ್ಬಂದಿಯೂ ಇರಲಿಲ್ಲ ಎಂದು ಆರೋಪಿಸಿದರು.
ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಶಂಭುಲಿಂಗ ಹಿರೇಮಠ ಇಲಾಖೆಯಲ್ಲಿ ಭಾರೀ ಅಕ್ರಮ ಮಾಡಿದ್ದಾರೆ. ಅದರಂತೆ ಅವರ ಬೆನ್ನಿಗೆ ಸ್ಥಳೀಯ ಜನ ಪ್ರತಿನಿಧಿಗಳು ನಿಲ್ಲುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ಈ ಕುರಿತು ಸಿಡಿಪಿಐ ಶಂಭುಲಿಂಗ ಹಿರೇಮಠ ದೂರವಾಣಿಯಲ್ಲಿ ಪ್ರತಿಕ್ರಿಯಿಸಿ, ಇಲಾಖೆಯಿಂದ ತಾಲೂಕಿನ ಪ್ರತಿಯೊಂದು ಅಂಗನವಾಡಿಗೆ ಸರಬರಾಜು ಮಾಡಲು ಲಾರಿ ಮೂಲಕ ಆಹಾರ ಪದಾರ್ಥ ಕಳಿಸಲಾಗಿದೆ. ಅದಕ್ಕೆ ಕೆಲ ಸಂಘಟನೆ ಮುಖಂಡರು ಅಪಾರ್ಥ ಮಾಡಿಕೊಂಡು ಪೊಲೀಸ್ ಠಾಣೆಗೆ ವಾಹನ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.