Advertisement

ಸಂಚಾರಿ ನಿಯಮ ಉಲ್ಲಂಘನೆ; 4300 ರೂ. ದಂಡ

03:04 PM Jul 23, 2019 | Team Udayavani |

ಹೊನ್ನಾಳಿ: ಪಟ್ಟಣದಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘಿಸುವ ದ್ವಿಚಕ್ರ ಹಾಗೂ ಇತರ ವಾಹನ ಸವಾರರಿಗೆ ದಂಡ ವಿಧಿಸುವ ಮೂಲಕ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

Advertisement

ಸೋಮವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಾಹನ ಸಂಚಾರಿ ನಿಯಮ ಪಾಲಿಸದ ಜನರನ್ನು ಪಿಎಸ್‌ಐ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಹಿಡಿದು ದಂಡ ವಿಧಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಿಎಸ್‌ಐ ತಿಪ್ಪೇಸ್ವಾಮಿ, ನಮ್ಮ ಯುವಕರು ತಮ್ಮದಲ್ಲದ ಮೋಟಾರ್‌ ಬೈಕ್‌ ಓಡಿಸುವುದು, ಡಿ.ಎಲ್. ಇಲ್ಲದೆ ದ್ವಿಚಕ್ರ ವಾಹನ ಓಡಿಸುವುದು, ಒಂದು ಬೈಕ್‌ನಲ್ಲಿ ಗರಿಷ್ಠ ಇಬ್ಬರು ಸಂಚಾರ ಮಾಡಬಹುದು ಎನ್ನುವ ನಿಯಮವಿದ್ದರೂ 3ರಿಂದ 4 ಯುವಕರು ಓಡಾಡುವುದು ಸೇರಿದಂತೆ ವಿವಿಧ ಟ್ರಾಫಿಕ್‌ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ಸುರಕ್ಷಿತವಲ್ಲ ಎಂದು ಹೇಳಿದರು.

ಡಿ.ಎಲ್ ಇಲ್ಲದವರು ಹಾಗೂ ಇತರ ನಿಯಮಗಳನ್ನು ಪಾಲಿಸದೇ ವಾಹನ ಚಾಲನೆ ಮಾಡುವವರನ್ನು ಹಿಡಿದು ನಿರ್ದಾಕ್ಷಣ್ಯವಾಗಿ ದಂಡ ಹಾಕುತ್ತಿದ್ದೇವೆ. ಬೇರೆಯವರ ದ್ವಿಚಕ್ರ ವಾಹನ ಪಡೆದು ಸಂಚರಿಸುತ್ತಿದ್ದರೆ ಮುಲಾಜಿಲ್ಲದೆ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ದಂಡ ಹಾಕುತ್ತಿದ್ದೇವೆ ಎಂದು ಹೇಳಿದರು.

ಸೋಮವಾರ ಒಂದೇ ದಿನ ನಿಯಮ ಉಲ್ಲಂಘಿಸಿದವರಿಂದ 4300 ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದರು.

Advertisement

ಸಂಚಾರಿ ನಿಯಮ ಉಲ್ಲಂಘಿಸಿದರೆ ವಿಧಿಸಬಹುದಾದ ದಂಡದ ಮೊತ್ತವನ್ನು ಸರ್ಕಾರ ಹೆಚ್ಚಿಸಿದ್ದು, ಇದನ್ನು ಸಾರ್ವಜನಿಕರು ಗಮನದಲ್ಲಿರಿಸಿಕೊಳ್ಳಬೇಕು ಅತೀ ವೇಗದ ಚಾಲನೆಗೆ ರೂ.300ರಿಂದ 500ಕ್ಕೆ ದಂಡ ಹೆಚ್ಚಿಸಲಾಗಿದೆ. ಅಧಿಸೂಚನೆ ಹೊರಡಿಸಿರುವ ಪ್ರದೇಶಗಳಲ್ಲಿ ನಿಗದಿ ಪಡಿಸಿದ ವೇಗಕ್ಕಿಂತ ಹೆಚ್ಚಿನ ವೇಗ ಇದ್ದರೆ ರೂ.300ರಿಂದ 1000 ರೂ.ಗೆ ಹೆಚ್ಚಿಸಲಾಗಿದೆ. ಚಾಲನೆ ವೇಳೆ ಮೊಬೈಲ್ ಬಳಕೆಗೆ ರೂ.100ರಿಂದ 2000ರವರೆಗೆ, ವಿಮಾ ಪಾಲಿಸಿ ಇಲ್ಲದ ವಾಹನ ಚಾಲನೆಗೆ ರೂ.500 ರಿಂದ 1000ದವರೆಗೆ, ನೋಂದಣಿ ಮಾಡಿಸದ ವಾಹನ ಚಾಲನೆಗೆ ರೂ.5000ರಿಂದ 10,000 ರೂ. ವರೆಗೆ, ಎಫ್‌ಸಿ ಪ್ರಮಾಣ ಪತ್ರ ಇಲ್ಲದ ವಾಹನ ಚಾಲನೆಗೆ ರೂ.100ರಿಂದ 5000ವರೆಗೆ, ನಿಷೇಧಿತ ಸ್ಥಳದಲ್ಲಿ ವಾಹನ ನಿಲ್ಲಿಸುವುದು ಹಾಗೂ ಅಪಾಯಕಾರಿಯಾಗಿ ವಾಹನ ನಿಲ್ಲಿಸುವುದಕ್ಕೆ ರೂ.100ರಿಂದ 1000 ರೂ.ವರೆಗೆ ದಂಡ ವಸೂಲಿ ಮಾಡಬಹುದಾಗಿದೆ ಎಂದು ಹೇಳಿದರು.

ಪಟ್ಟಣದ ಪ್ರಮುಖ ರಸ್ತೆಗಳಾದ ಟಿ.ಎಂ. ರಸ್ತೆ ಹಾಗೂ ನ್ಯಾಮತಿ ರಸ್ತೆಗಳಲ್ಲಿ ಬೆಸ ಮತ್ತು ಸಮ ದಿನಗಳಿಗನುಗುಣವಾಗಿ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್‌ ಮಾಡುವ ವ್ಯವಸ್ಥೆ ತಂದಿದ್ದು ಇದರಿಂದ ಪಾದಚಾರಿಗಳಿಗೆ ಅನುಕೂಲವಾಗಿದೆ. ಬಸ್‌, ಲಾರಿಗಳು ಯಾವುದೇ ಟ್ರಾಫಿಕ್‌ ಜಾಮ್‌ ಇಲ್ಲದೆ ಸರಾಗವಾಗಿ ಮುಂದೆ ಹೋಗಲು ಸಹಾಯವಾಗಿದೆ ಎಂದು ಹೇಳಿದರು. ಎಎಸ್‌ಐ ಮಹಾಂತೇಶ್‌ ಮತ್ತು ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next