ಧಾರವಾಡ: ಹಳೆಯ ಡಿಎಸ್‌ಪಿ ವೃತ್ತದಿಂದ ಸವದತ್ತಿ ರಸ್ತೆವರೆಗೆ ನಿರ್ಮಾಣ ಆಗುತ್ತಿರುವ 2.4 ಕಿಮೀ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿ ಆಮೆಗತಿ ವೇಗದಿಂದ ಈ ಭಾಗದಲ್ಲಿ ಟ್ರಾಫಿಕ್ ಕಿರಿ ಕಿರಿ, ವ್ಯಾಪಾರ ವಹಿವಾಟು ಕುಸಿತದೊಂದಿಗೆ ದಿನ ನಿತ್ಯದ ಜನಜೀವನವೇ ಅಸ್ತವ್ಯಸ್ತ ಆಗುವಂತಾಗಿದೆ.
ವಿಶ್ವಬ್ಯಾಂಕ್‌ನ 18 ಕೋಟಿ ಆರ್ಥಿಕ ಸಹಕಾರದೊಂದಿಗೆ 23 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಈ ರಸ್ತೆ ಕಾಮಗಾರಿ ಆರಂಭಗೊಂಡು 2 ವರ್ಷವಾದರೂ ಸಾಧಿಸಿದ್ದು ಮಾತ್ರ ಇನ್ನೂ ಶೇ.50ರಷ್ಟು. 2018ರ ಡಿಸೆಂಬರ್ ಅಂತ್ಯಕ್ಕೆ ಅಂತಿಮ ಗಡುವು ನೀಡಿದ್ದ ವಿಶ್ವಸಂಸ್ಥೆ ಇಲ್ಲವಾದರೆ ಅನುದಾನಕಡಿತಗೊಳಿಸುವುದಾಗಿ ಎಚ್ಚರಿಸಿತ್ತು. ಆದರೆ ಶಾಸಕ ಅರವಿಂದ ಬೆಲ್ಲದ, ಈಗ ಕೇಂದ್ರ ಸಚಿವರಾಗಿರುವ ಸಂಸದ ಪ್ರಹ್ಲಾದ ಜೋಶಿ ಅವರ ಮನವಿ ಮೇರೆಗೆ ಮತ್ತೆ ಮತ್ತೂಂದು ಅವಕಾಶ ನೀಡಿತ್ತು. ಆದರೆ ಈಗ ಆ ಡಿಸೆಂಬರ್ ಮುಗಿದು ಮತ್ತೂಂದು ಡಿಸೆಂಬರ್ ಮುಗಿಯುತ್ತ ಬಂದರೂ ಕಾಮಗಾರಿ ಮುಗಿಯುವ ಲಕ್ಷಣವೇ ಕಾಣುತ್ತಿಲ್ಲ. ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿಯ ಬಗ್ಗೆ ಅಧಿಕಾರಿಗಳೇ ಹೇಳುವ ಪ್ರಕಾರ, ಒಳ ಚರಂಡಿ, ಪೈಪ್‌ಲೈನ್ ಸೇರಿದಂತೆ ನೆಲ ಹಂತದ ಕಾಮಗಾರಿಗಳಿಂದ ವಿಳಂಬವಾಗಿದೆ. ಈವರೆಗೆ ಶೇ.50 ಕಾಮಗಾರಿ ಮುಗಿದಿದ್ದು, 2020 ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬುದು ಅವರ ಅನಿಸಿಕೆ. ಆದರೆ ರಸ್ತೆ ಕಾಮಗಾರಿಯ ವೇಗ ನೋಡಿದರೆ 2020 ಮುಗಿದರೂ ಕಾಮಗಾರಿ ಮುಗಿಯಲ್ಲ ಎಂಬುದು ಸಾರ್ವಜನಿಕರ ಅಳಲು.
ಮುರುಘಾ ಮಠದ ರಸ್ತೆ ಬಂದ್: ಈ ಹಿಂದೆ ಹಳೆಯ ಡಿಎಸ್‌ಪಿ ವೃತ್ತದಿಂದ ಶಿವಾಜಿ ವೃತ್ತದವರೆಗಿನ ರಸ್ತೆ ಕಾಮಗಾರಿಗಾಗಿ ಇಲ್ಲಿ ಸಂಚಾರ ಬಂದ್ ಮಾಡಲಾಗಿತ್ತು. ಈಗ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಈಗ ಡಿಪೋ ಸರ್ಕಲ್‌ನಿಂದ ಮುರುಘಾ ಮಠದ ಮುಂದೆ ನೀರಿನ ಟ್ಯಾಂಕ್‌ವರೆಗೆ ಅಂದರೆ ಹೊಸ ಎಪಿಎಂಸಿ ಪ್ರವೇಶ ದ್ವಾರದವರೆಗಿನ ಅರ್ಧ ಕಿಮೀ ರಸ್ತೆ ಕಾಮಗಾರಿಯನ್ನು ನವೆಂಬರ್‌ನಲ್ಲಿ ಕೈಗೆತ್ತಿಕೊಂಡಿದ್ದು, ಹೀಗಾಗಿ ಈ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಇಡೀ ರಸ್ತೆಯನ್ನು ಸಂಪೂರ್ಣ ಜೆಸಿಬಿ ಮೂಲಕ ಅಗೆದಿದ್ದು, ರಸ್ತೆ ಅಗಲೀಕರಣದ ಜೊತೆಗೆ ಒಳಚರಂಡಿ ಹಾಗೂ ನೀರಿನ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಸಾಗಿದೆ.
ಟ್ರಾಫಿಕ್ ಕಿರಿ ಕಿರಿ: ಮುರುಘಾ ಮಠದ ರಸ್ತೆಯಲ್ಲಿ ಸಂಚಾರ ಬಂದ್ ಮಾಡಿರುವ ಕಾರಣ ಸವದತ್ತಿ ರಸ್ತೆ ಮಾರ್ಗವಾಗಿ ಹೋಗುವ ಹಾಗೂ ಅಮ್ಮಿನಬಾವಿ ಸೇರಿದಂತೆ ವಿವಿಧ ಗ್ರಾಮಕ್ಕೆ ತೆರಳುವ ಸಾರಿಗೆ ಬಸ್‌ಗಳು ಕಮಲಾಪುರದ ಮೂಲಕ ಹೊಸ ಎಪಿಎಂಸಿ ರಸ್ತೆಯ ಮೂಲಕವೇ ಸಾಗುತ್ತಿವೆ. ಹೀಗಾಗಿ ಬಸ್‌ಗಳ ಸಂಚಾರ ಹೆಚ್ಚಳದ ಜೊತೆಗೆ ಧೂಳುಮಯದ ಈ ರಸ್ತೆ ಕಿರಿದಾಗಿರುವ ಕಾರಣ ದಿನನಿತ್ಯ ಟ್ರಾಫಿಕ್ ಸಮಸ್ಯೆ ಉಲ್ಬಣಗೊಳ್ಳುತ್ತಲೇ ಸಾಗಿದೆ. ಹೊಸ ಎಪಿಎಂಸಿ ಆವರಣದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯುವ ಹೋಲ್‌ಸೇಲ್ ತರಕಾರಿ ವ್ಯಾಪಾರದ ಜಾಗದಲ್ಲಿ ತಲೆಯೆತ್ತಿರುವ ಡಬ್ಟಾ ಅಂಗಡಿಗಳು ಹಾಗೂ ಬೇಕಾಬಿಟ್ಟಿ ಆಗಿ ನಿಲ್ಲಿಸುವ ಟಂಟಂ, ಆಟೋ ಸೇರಿದಂತೆ ಇನ್ನಿತರ ವಾಹನಗಳಿಂದಲೂ ಟ್ರಾಫಿಕ್ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಇದಲ್ಲದೇ ಮುರುಘಾ ಮಠದ ಹಿಂಬದಿಯ ರಸ್ತೆಯಲ್ಲೂ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಲಿದೆ. ಇದರೊಂದಿಗೆ ಖಾಸಗಿ ಶಾಲೆ-ಕಾಲೇಜುಗಳ ಬಸ್ಸುಗಳ ಸಂಚಾರ ಮಾರ್ಗ ಹಾಗೂ ನಿಲ್ಲುವ ಸ್ಥಳಗಳು ಬದಲಾಗಿರುವ ಕಾರಣ ಈ ಭಾಗದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ವ್ಯಾಪಾರಕ್ಕೂ ಹೊಡೆತ: ರಸ್ತೆ ಎರಡೂ ಬದಿಯಲ್ಲಿ ವ್ಯಾಪಾರವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ನೂರಾರು ಕುಟುಂಬಗಳಿಗೂ ವ್ಯಾಪಾರದಲ್ಲಿ ಆಗಿರುವ ಕುಸಿತದಿಂದ ಆತಂಕ ಮನೆ ಮಾಡಿದೆ. ಈ ರಸ್ತೆ ಬದಿಯ ವ್ಯಾಪಾರ ವಹಿವಾಟುಗಳಲ್ಲಿ ಶೇ.50 ಕುಸಿತವಾಗಿದೆ. ದಿನಕ್ಕೆ 15 ಸಾವಿರ ರೂ. ವ್ಯಾಪಾರ ಆಗುತ್ತಿದ್ದ ಹೋಟೆಲ್, ಬೇಕರಿಗಳಲ್ಲಿ ದಿನಕ್ಕೆ 2 ಸಾವಿರ ವ್ಯಾಪಾರ ಆಗುವುದೇ ದೊಡ್ಡದಾಗಿದೆ. ಕಳೆದ 2 ವರ್ಷಗಳಿಂದ ನಷ್ಟ ಅನುಭವಿಸುತ್ತಿರುವ ಕೆಲವರು ಅಂಗಡಿ ಬಂದ್ ಮಾಡಿದ್ದರೆ ಕೆಲವರು ಸ್ಥಳಾಂತರವೇ ಮಾಡಿದ್ದಾರೆ. ಉಳಿದವರು ಅನಿವಾರ್ಯವಾಗಿ ಇದ್ದಲ್ಲಿಯೇ ಮುಂದುವರಿದಿದ್ದು, ಆದಷ್ಟು ಬೇಗ ಈ ಕಾಮಗಾರಿ ಮುಗಿಯಲಿ ಎಂಬ ಪ್ರಾರ್ಥನೆಯಲ್ಲಿಯೇ ವ್ಯಾಪಾರ ಮುಂದುವರಿಸಿದ್ದಾರೆ.
-ಶಶಿಧರ್ ಬುದ್ನಿ