Advertisement

ಚಾರ್ಮಾಡಿಯಲ್ಲಿ ಸಂಚಾರ ಸಂಕಟ

04:09 PM Jan 22, 2018 | Team Udayavani |

ಮೂಡಿಗೆರೆ: ಶಿರಾಡಿ ಘಾಟ್‌ ಕಾಮಗಾರಿಗಾಗಿ ಜ. 20ರಿಂದ ಮಾರ್ಗ ಬಂದ್‌ ಮಾಡಿದ ಹಿನ್ನೆಲೆಯಲ್ಲಿ ಮೊದಲ ದಿನ ಚಾರ್ಮಾಡಿ ಘಾಟ್‌ ಭಾಗದ ಕೊಟ್ಟಿಗೆಹಾರದಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಚಾರ್ಮಾಡಿ ಘಾಟ್‌ನ ಕೆಲವೆಡೆ ಇಕ್ಕಟ್ಟಿನ ರಸ್ತೆಯಿದ್ದು, ಘನ ಗಾತ್ರದ ವಾಹನಗಳನ್ನು ಬಿಟ್ಟ ಪರಿಣಾಮ ಸಂಚಾರ ನಿಯಂತ್ರಣಕ್ಕೆ ಅನಾನುಕೂಲವಾಗಿ ಸಂಚಾರಕ್ಕೆ ಕಿರಿಕಿರಿ ಉಂಟಾಯಿತು. ಈ ಮಾರ್ಗದಲ್ಲಿ ಶನಿವಾರ ಬೆಳಗ್ಗೆ ಕಡಿಮೆಯಿದ್ದ ವಾಹನ ದಟ್ಟಣೆ, ಮಧ್ಯಾಹ್ನದ ನಂತರ ಭಾರೀ ಸರಕು ಸಾಗಾಟ ಲಾರಿ, ರಾಜಹಂಸ ಮತ್ತು ಇತರ ವಾಹನಗಳ ಹೆಚ್ಚಳದಿಂದ ಸಂಚಾರ ದಟ್ಟಣೆ ಉಂಟಾಯಿತು. ಭಾನುವಾರ ಕೂಡಾ ರಜೆ ಇದ್ದ ಕಾರಣ ಇನ್ನೂ ಹೆಚ್ಚಿನ ವಾಹನಗಳು ಈ ಮಾರ್ಗದಲ್ಲಿ ಓಡಾಡಿದವು.
ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.

Advertisement

ಚಾರ್ಮಾಡಿ ಘಾಟ್‌ ಭಾಗದ ಅಣ್ಣಪ್ಪ ಸ್ವಾಮಿ ದೇವಸ್ಥಾನ ಸಮೀಪ ಕಿರಿದಾದ  ರಸ್ತೆಯಿದ್ದು, ವೇಗದಿಂದ ಬರುವ ವಾಹನಗಳು ಮುಂಭಾಗದಿಂದ ಬರುವ ವಾಹನಗಳು ಕಾಣಿಸದೇ ತೊಂದರೆ ಅನುಭವಿಸುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡ 11ನೇ ತಿರುವಿನ ಎದುರು ಕಡಿದಾದ ಬಂಡೆ ರಸ್ತೆಗೆ ಸಮೀಪವಾಗಿದ್ದು, ವೇಗದಿಂದ ವಾಹನಗಳು ಬಂದರೆ ಎರಡು ವಾಹನಗಳು ಏಕಕಾಲದಲ್ಲಿ ಸಂಚರಿಸಲು ಸಾಧ್ಯವಾಗದೇ ಹಿಂದೆ ಮುಂದೆ ವಾಹನಗಳನ್ನು ಮುನ್ನಡೆಸುವಾಗ ಟ್ರಾಫಿಕ್‌ ಜಾಮ್‌ ಸಂಭವಿಸುತ್ತಿದೆ. ಅಲ್ಲದೇ ಶಿರಾಡಿ ಘಾಟನಲ್ಲಿ ಓಡಾಡುವ ಚಾಲಕರಿಗೆ ಚಾರ್ಮಾಡಿ ಘಾಟಿಯ ರಸ್ತೆಯ ಪರಿಚಯ ಇಲ್ಲದಿರುವುದರಿಂದ ಅವರ ಚಾಲನಾಶೈಲಿಯಿಂದಲೂ ವಾಹನ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಕೊಟ್ಟಿಗೆಹಾರ ಭಾಗದಲ್ಲಿ ಪ್ರತಿ ಶನಿವಾರ, ಭಾನುವಾರ ಸಾಮಾನ್ಯ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಆದರೆ ಈಗ ಶಿರಾಡಿ ಘಾಟ್‌ ಬಂದಾದ ಕೂಡಲೇ ಇನ್ನೂ ಹೆಚ್ಚಿನ ವಾಹನಗಳಿಂದ ಸಂಚಾರ ದಟ್ಟನೆ
ಉಂಟಾಗುತ್ತಿದೆ. ಹೀಗಾಗಿ ಭಾನುವಾರ ಮಧ್ಯಾಹ್ನದ ನಂತರ ಪೊಲೀಸರು ಭಾರೀ ಸರಕು ಸಾಗಾಟದ ಲಾರಿಗಳನ್ನು ಹೋಗಲು ಬಿಡದೇ ವಾಪಾಸ್‌ ಬದಲಿ ರಸ್ತೆಯಲ್ಲಿ ಚಲಿಸುವಂತೆ ಸೂಚಿಸಿದ್ದಾರೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ. 

ಚಾರ್ಮಾಡಿ ಘಾಟ್‌ ರಸ್ತೆ ಕರಾವಳಿಗೆ ಸಂಪರ್ಕ ಕಲ್ಪಿಸುವುದರಿಂದ ಪ್ರವಾಸಿಗರ ವಾಹನಗಳ ಸಂಖ್ಯೆ ಹೆಚ್ಚಳವಾಗಿದೆ. ಆದರೆ ಭಾರೀ ಸರಕು ಸಾಗಾಟದ ವಾಹನಗಳನ್ನು ಮೂಡಿಗೆರೆ ಹ್ಯಾಂಡ್‌ ಪೋಸ್‌ನಿಂದಲೇ ಮತ್ತು ಚಾರ್ಮಾಡಿ ಅರಣ್ಯ ತಪಾಸಣಾ ಗೇಟ್‌
ನಿಂದಲೇ ನಿಯಂತ್ರಿಸಿದರೆ ಚಾರ್ಮಾಡಿ ಘಾಟ್‌ ಸಂಚಾರಕ್ಕೆ ಮುಕ್ತವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಸಂಚಾರ ದಟ್ಟನೆ ಉಂಟಾಗದಂತೆ ಘನ ವಾಹನಗಳನ್ನು ಬದಲಿ ರಸ್ತೆಯಿಂದ ಚಲಿಸಲು ಸೂಚನೆ ನೀಡುವುದು ಉತ್ತಮ ಎಂದು ಈ ವೇಳೆ ಪ್ರವಾಸಿಯೊಬ್ಬರ ಅಭಿಪ್ರಾಯಪಟ್ಟರು. 

ನಾಗೇಶ್‌ ಹೆಬ್ಟಾರ್‌

Advertisement

Udayavani is now on Telegram. Click here to join our channel and stay updated with the latest news.

Next